ಬಹುಗ್ರಾಮ ನೀರಿನ ಯೋಜನೆ ಕ್ರಾಂತಿ

15 kdr 7 web
Published on

ತರೀಕೆರೆ: ಜಲಜೀವನ್ ಮಿಷನ್ ಯೋಜನೆಯಡಿ ತರೀಕೆರೆ ಮತ್ತು ಅಜ್ಜಂಪುರ ತಾಲೂಕಿನ ಪ್ರತಿ ಮನೆಗೂ ನೀರು ಪೂರೈಸುವ 625 ಕೋಟಿ ರೂ. ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕ್ರಾಂತಿಕಾರಕ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಣ್ಣಿಸಿದರು.  ದೋರನಾಳು ಸರ್ಕಾರಿ ಶಾಲೆ ಆವರಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದಿಂದ ಏರ್ಪಡಿಸಿದ್ದ ಬಹುಗ್ರಾಮ ಕುಡಿಯುವ ನೀರು ಯೋಜನೆ, ತರೀಕೆರೆ ವಿಧಾನಸಭಾ ಕ್ಷೇತ್ರದ ಬೂದು ನೀರು ನಿರ್ವಹಣಾ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.

ಜಲಜೀವನ್ ಮಿಷನ್ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. ಪ್ರಧಾನಿ ನರೇಂದ್ರ ಮೋದಿ ಅವರ ಅಚ್ಚುಮೆಚ್ಚಿನ ಕಾರ್ಯಕ್ರಮ. ಒಂದು ವರ್ಷದ ಅವಧಿಯಲ್ಲಿ ದೇಶದ 7 ಕೋಟಿಗಿಂತಲೂ ಹೆಚ್ಚು ಹಾಗೂ ರಾಜ್ಯದ 30 ಲಕ್ಷಕ್ಕಿಂತಲೂ ಹೆಚ್ಚು ಮನೆಗಳಿಗೆ ಯೋಜನೆ ಮೂಲಕ ನೀರು ಪೂರೈಕೆಯಾಗಿದೆ. ಮನೆ ಮನೆಗೂ ಕುಡಿಯುವ ನೀರು ಪೂರೈಸುವುದು ಸರ್ಕಾರದ ಆದ್ಯತೆಯಾಗಿದೆ. ಈ ಯೋಜನೆಗಾಗಿ ರಾಜ್ಯ ಸರ್ಕಾರ 9 ಸಾವಿರ ಕೋಟಿ ರೂ. ಬಜೆಟ್​ನಲ್ಲಿ ಮೀಸಲಿರಿಸಿದೆ ಎಂದು ತಿಳಿಸಿದರು.

ಬಿಜೆಪಿ ಸರ್ಕಾರ ಶಿಕ್ಷಣ, ಸ್ವಚ್ಛತೆಗೆ ಒತ್ತುನೀಡಿ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ವಿರೋಧದ ನಡುವೆ ಆರಂಭಿಸಲಾದ ಭದ್ರಾ ಮೇಲ್ದಂಡೆ ಯೋಜನೆೆ ರಾಷ್ಟ್ರೀಯ ಯೋಜನೆಯಾಗಿ ಘೊಷಿಸಲ್ಪಟ್ಟಿದ್ದು, ಮುಂದಿನ ದಿನಗಳಲ್ಲಿ ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ತಿಳಿಸಿದರು.  ಉದ್ಯೋಗ ಖಾತ್ರಿ ಯೋಜನೆಯಲ್ಲಿ ಚಿಕ್ಕಮಗಳೂರು ಜಿಲ್ಲೆ ಸಾಧನೆ ಮಾಡಿದ್ದು, ಇತರ ಜಿಲ್ಲೆಗಳಿಗೆ ಮಾದರಿಯಾಗಿದೆ   ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net