

ಶ್ರೀರಂಗಪಟ್ಟಣ: ತಾಲೂಕಿನ ಮಹದೇವಪುರ ಗ್ರಾಮದಿಂದ 33 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಮಹತ್ವಾಕಾಂಕ್ಷೆಯ ಬಹುಗ್ರಾಮಗಳ ಕುಡಿಯುವ ನೀರು ಪೂರೈಕೆ ಯೋಜನೆ ಲೋಕಾರ್ಪಣೆಗೊಂಡಿದೆ. ಇದರೊಂದಿಗೆ ಈ ಭಾಗದ ಜನರ ಬಹುವರ್ಷಗಳ ಕನಸು ನನಸಾದಂತಾಗಿದೆ.
ಕುಡಿಯುವ ನೀರಿನ ಯೋಜನೆ ಸಂಬಂಧ ಶಾಸಕ ರವೀಂದ್ರ ಶ್ರೀಕಂಠಯ್ಯ ಹೆಚ್ಚು ಶ್ರಮ ವಹಿಸಿದ್ದರು. ಇದಕ್ಕೆ ಸ್ಪಂದಿಸಿದ ಎಚ್.ಡಿ.ಕುಮಾರಸ್ವಾಮಿ ಮೈತ್ರಿ ಸರ್ಕಾರದ ಅವಧಿಯಲ್ಲಿ ಅಂದರೆ 2018ರಲ್ಲಿ ಒಟ್ಟು 33 ಗ್ರಾಮಗಳಿಗೆ ಕಾವೇರಿ ನದಿಯಿಂದ ನೀರು ಪೂರೈಕೆಗೆ ಯೋಜನೆಗೆ ಅಸ್ತು ಎಂದಿದ್ದರು. ಅದರಂತೆ ಕಾಮಗಾರಿಯೂ ಪೂರ್ಣಗೊಂಡಿತ್ತು.
ಈ ನಡುವೆ ಡಿ.23ರಂದು ಪಂಚರತ್ನ ಯಾತ್ರೆ ಹಿನ್ನೆಲೆಯಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಶ್ರೀರಂಗಪಟ್ಟಣಕ್ಕೆ ಆಗಮಿಸಿದ್ದರು. ಅದರಂತೆ ಮಹದೇವಪುರಕ್ಕೆ ಯಾತ್ರೆ ಆಗಮಿಸಿದ ವೇಳೆ ಶಾಸಕರ ಕೋರಿಕೆಯ ಮೇರೆಗೆ ಲೋಕಾರ್ಪಣೆಗೊಳಿಸಿದರು. ಟೇಪ್ ಕತ್ತರಿಸಿ, ಯಂತ್ರದ ಬಟನ್ ಒತ್ತುವ ಮೂಲಕ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಿದರು.
ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ, ಜೀವನದಿ ಕಾವೇರಿ ಪಕ್ಕದಲ್ಲೇ ಹರಿದರೂ ನನ್ನ ಜನರು ಹಲವು ವರ್ಷಗಳಿಂದ ಕುಡಿಯುವ ನೀರಿಗೆ ಸಾಕಷ್ಟು ಸಮಸ್ಯೆ ಎದುರಿಸಿದ್ದರು. ಈ ಹಿನ್ನೆಲೆಯಲ್ಲಿ 54 ಕೋಟಿ ರೂ.ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಎಚ್.ಡಿ.ಕುಮಾರಸ್ವಾಮಿ ಒಪ್ಪಿಗೆ ನೀಡಿದ್ದರು. ಆದರೆ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಯೋಜನೆಗೆ ನಿಗದಿಯಾಗಿದ್ದ ಹಣದ ಬದಲಿಗೆ ಕಡಿಮೆ ಹಣವನ್ನಾದರೂ ಸಕಾಲಕ್ಕೆ ಬಿಡುಗಡೆ ಮಾಡದೆ ಹೆಜ್ಜೆ ಹೆಜ್ಜೆಗೂ ಸಮಸ್ಯೆ ನೀಡಿದೆ ಎಂದು ಆರೋಪಿಸಿದರು.