ಬಹುಕೌಶಲ ಅಭಿವೃದ್ಧಿ ಕಟ್ಟಡಕ್ಕೆ ಅಸ್ತು

Karj
Published on

ಬೆಳಗಾವಿ: ಬೆಳಗಾವಿಯಲ್ಲಿ ಈಗಾಗಲೇ ಕಾರ್ಯಾರಂಭವಾಗಿರುವ ಅಂತಾರಾಷ್ಟ್ರೀಯ ಗುಣಮಟ್ಟದ ಕರ್ನಾಟಕ-ಜರ್ಮನ್ ಬಹುಕೌಶಲ ಅಭಿವೃದ್ಧಿ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಗುರುವಾರ ನಡೆದ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ. 16.43 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗಲಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ವಿಶ್ವ ಯುವ ಕೌಶಲ ದಿನಾಚರಣೆ ದಿನದಂದು ಸರ್ಕಾರ ತೀರ್ಮಾನ ಬಹಳ ಮಹತ್ವದ್ದೆನಿಸಿದೆ. ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ಕರ್ನಾಟಕ- ಜರ್ಮನ್ ಬಹುಕೌಶಲ ಅಭಿವೃದ್ಧಿ ಕೇಂದ್ರ ಸೊಸೈಟಿ, ಜರ್ಮನ್ ದೇಶದ ತಾಂತ್ರಿಕ ಸಹಯೋಗದೊಂದಿಗೆ ತಾಂತ್ರಿಕ ಕ್ಷೇತ್ರಗಳಲ್ಲಿ ತರಬೇತಿ ನೀಡಲು ಅಂತಾರಾಷ್ಟ್ರೀಯ ಗುಣಮಟ್ಟದ 5 ಕರ್ನಾಟಕ ಜರ್ಮನ್ ಬಹುಕೌಶಲ ಅಭಿವೃದ್ಧಿ ಕೇಂದ್ರಗಳನ್ನು ರಾಜ್ಯದ ವಿವಿಧ ನಗರಗಳಲ್ಲಿ ಸ್ಥಾಪಿಸಲಾಗಿದೆ. ಬೆಳಗಾವಿಯಲ್ಲಿ ಬಾಡಿಗೆ ಕಟ್ಟಡದಲ್ಲಿ ಈ ಕೇಂದ್ರವು ನಡೆಯುತ್ತಿದ್ದು, ಸ್ವಂತ ಕಟ್ಟಡ ಹೊಂದಲು ಜಮೀನು ಮಂಜೂರಾಗಿದೆ. 16.43 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡುವ ಉದ್ದೇಶ ಇದೆ. ಈ ಕಟ್ಟಡ ಕಾಮಗಾರಿ ಲೋಕೋಪಯೋಗಿ ಇಲಾಖೆ ಸಂಸ್ಥೆಗೆ ವಹಿಸಲು ಸಚಿವ ಸಂಪುಟ ಸಮಿತಿಯಲ್ಲಿ ಅನುಮೋದನೆ ನೀಡಲಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಕೃತಜ್ಞತೆ ತಿಳಿಸಿದ್ದಾರೆ.

ಈ ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆಗಳು ಪ್ರತಿ ವರ್ಷಕ್ಕೆ 4000 ಅಭ್ಯರ್ಥಿಗಳಿಗೆ ಉತ್ಕೃಷ್ಟ ಗುಣಮಟ್ಟದ ತರಬೇತಿ ನೀಡುತ್ತದೆ. ಈ ಕಟ್ಟಡ ಕಾಮಗಾರಿಗಳನ್ನು 3 ತಿಂಗಳೊಳಗೆ ಪ್ರಾರಂಭಿಸಲಾಗುವುದು. ಅಲ್ಪಾವಧಿ ಹಾಗೂ ದೀರ್ಘಾವಧಿ ತರಬೇತಿಯಿಂದ ನಿರುದ್ಯೋಗಿ ಯುವಕ ಯುವತಿಯರಿಗೆ ಅದರಲ್ಲೂ ಪರಿಶಿಷ್ಟ ಜಾತಿ ಮತ್ತು ಪಂಗಡ, ಹಿಂದುಳಿದ ವರ್ಗಗಳ ಅಭ್ಯರ್ಥಿಗಳು, ಅಲ್ಪಸಂಖ್ಯಾತರು ಮತ್ತು ಮಹಿಳೆಯರು ಸೇರಿ ಎಲ್ಲ ಸಮುದಾಯದ ಅಭ್ಯರ್ಥಿಗಳು ತರಬೇತಿ ಪಡೆದು ಸ್ವಾವಲಂಭಿಯಾಗಿ ಜೀವನ ನಡೆಸಲು ಅನುವಾಗಲಿದೆ. ಯುವ ಜನತೆಯು ತಂತ್ರಜ್ಞಾನವನ್ನು ಅಳವಡಿಸಿಕೊಂಡು ಇಂದಿನ ತಾಂತ್ರಿಕ ಯುಗಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸಬೇಕು. ಪರಿಣತಿ ಪಡೆದ ಅಭ್ಯರ್ಥಿಗಳು ಸ್ವಾವಲಂಬಿಗಳಾಗಿ ಜೀವನ ನಡೆಸಲು ವಿಪುಲ ಅವಕಾಶಗಳಿವೆ. ಅದಕ್ಕೆ ಪೂರಕವಾಗಿ ಉತ್ತಮ ಗುಣಮಟ್ಟದ ತರಬೇತಿಯನ್ನು ಈ ಕೇಂದ್ರವು ನೀಡಲಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net