ಬಹಿಷ್ಕಾರಕ್ಕೆ ಬೈ ಚುನಾವಣೆಗೆ ಜೈ

Kherda GP
Published on

ರೇವಣಸಿದ್ದಪ್ಪ ಪಾಟೀಲ್ ಬೀದರ್

ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನ ತಮ್ಮೂರಿಗೆ ಕೊಡಬೇಕೆಂದು ಪಟ್ಟು ಹಿಡಿದು ಕಳೆದ ಸಲದ ಚುನಾವಣೆ ಬಹಿಷ್ಕರಿಸಿದ್ದ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಹಿರನಾಗಾಂವ್ ಗ್ರಾಮಸ್ಥರು, ಈಗ ಚುನಾವಣೆಗೆ ಸೈ ಎಂದಿದ್ದಾರೆ. ಐದು ವರ್ಷದ ಹೋರಾಟದ ಬಳಿಕವೂ ಇವರ ಬೇಡಿಕೆ ಈಡೇರಿಲ್ಲ. ಹೀಗಾಗಿ ಈಗ ಚುನಾವಣೆಗೆ ಸ್ಪರ್ಧಿಸಿಯೇ ಬೇಡಿಕೆ ಕುರಿತು ಹೋರಾಟ ನಡೆಸಲು ನಿರ್ಧರಿಸಿದ್ದಾರೆ.

ಖೇರ್ಡಾ (ಬಿ) ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಹಿರನಾಗಾಂವ್ಗೆ ಗ್ರಾಪಂ ಕೇಂದ್ರ ಸ್ಥಾನ ನೀಡಬೇಕು ಎಂಬುದು ಹಲವು ವರ್ಷಗಳ ಬೇಡಿಕೆ. ಸ್ಥಳೀಯರು ನಿರಂತರ ವಿವಿಧ ರೀತಿಯಲ್ಲಿ ಹೋರಾಟ ನಡೆಸುತ್ತಿದ್ದರೂ ಬೇಡಿಕೆ ಈಡೇರಲಿಲ್ಲ. 2015ರಲ್ಲಿ ಗ್ರಾಪಂ ಚುನಾವಣೆ ಬಹಿಷ್ಕಾರ ಹಾಕಿದರು.ಗ್ರಾಮದಲ್ಲಿರುವ 7 ಸ್ಥಾನಗಳಿಗೆ ಯಾರೊಬ್ಬರೂ ನಾಮಪತ್ರವೇ ಸಲ್ಲಿಸಲಿಲ್ಲ. ಹೀಗಾಗಿ 5 ವರ್ಷದಿಂದ ಗ್ರಾಪಂನಲ್ಲಿ ಗ್ರಾಮದ ಪ್ರತಿನಿಧಿ ಇರಲಿಲ್ಲ. ಬೇಡಿಕೆ ಈಡೇರದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ ಈ ಸಲ ಚುನಾವಣೆಯಿಂದ ದೂರವುಳಿಯುವ ಬದಲು, ಚುನಾವಣೆಯಲ್ಲಿ ಪಾಲ್ಗೊಂಡೇ ಹೋರಾಟದ ಹಾದಿ ಹಿಡಿಯುವ ಹೆಜ್ಜೆಯಿಟ್ಟಿದ್ದಾರೆ.

ಕಳೆದ ಗ್ರಾಪಂ ನಂತರ ಜರುಗಿದ ಜಿಪಂ ಹಾಗೂ ತಾಪಂ ಚುನಾವಣೆಯನ್ನೂ ಗ್ರಾಮಸ್ಥರು ಬಹಿಷ್ಕರಿಸಿದ್ದರು. 7 ಖಾಲಿ ಸ್ಥಾನಗಳಿಗಾಗಿ ಎರಡ್ಮೂರು ಬಾರಿ ಉಪ ಚುನಾವಣೆ ಘೋಷಣೆ ಮಾಡಲಾಗಿತ್ತಾದರೂ ಯಾರೊಬ್ಬರೂ ನಾಮಪತ್ರ ಸಲ್ಲಿಸಿಲ್ಲ. ಚುನಾಯಿತ ಪ್ರತಿನಿಧಿ ಹಾಗೂ ಅಧಿಕಾರಿಗಳು ಸಾಕಷ್ಟು ಮನವೊಲಿಕೆಗೆ ಯತ್ನಿಸಿದ್ದರೂ ಗ್ರಾಮಸ್ಥರು ಒಗ್ಗಟ್ಟು ತೋರಿದರು. ಎಂಎಲ್ಎ, ಎಂಪಿ ಹೊರತುಪಡಿಸಿ ಇತರೆಲ್ಲ ಚುನಾವಣೆಗಳಿಗೆ ಐದು ವರ್ಷ ಬಹಿಷ್ಕಾರ ಮಾಡಿದರು. ಇದೀಗ ಚುನಾವಣೆ ಬಹಿಷ್ಕಾರ ಬಿಟ್ಟು, ಸ್ಪರ್ಧೆಗೆ ಸೈ ಎಂದಿದ್ದಾರೆ. ಎಲ್ಲ 7 ಸ್ಥಾನಗಳಿಗೆ ಗ್ರಾಮಸ್ಥರು ನಾಮಪತ್ರ ಸಲ್ಲಿಸಿದ್ದು, ಡಿ.22ರಂದು ಮತದಾನ ನಡೆಯಲಿದೆ. ಎಲ್ಲ ಅಭ್ಯರ್ಥಿಗಳ ಧ್ಯೇಯ ಗ್ರಾಪಂ ಕೇಂದ್ರ ರಚನೆ ಆಗಿರುವ ಕಾರಣ ಇಲ್ಲಿನ ಚುನಾವಣೆ ಹಾಗೂ ನಂತರ ಏನೆಲ್ಲ ಬೆಳವಣಿಗೆ ಆಗಬಹುದು ಎಂಬುದು ಕುತೂಹಲ ಮೂಡಿಸಿದೆ.

ಕಳೆದ ಅವಧಿಯಲ್ಲಿ ಹಿರನಾಗಾಂವ್ನ 7 ಸ್ಥಾನಕ್ಕೆ ಚುನಾವಣೆ ನಡೆಯದಿದ್ದರೂ ಕೋಟ್೯ ಸಮರ ಬಳಿಕ ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯ್ಕೆ ಮಾಡಿ ಆಡಳಿತ ನಡೆಸಲಾಗಿತ್ತು. 20 ಸದಸ್ಯ ಬಲದ ಖೇರ್ಡಾ (ಬಿ) ಗ್ರಾಪಂ ವ್ಯಾಪ್ತಿಗೆ ಧನ್ನೂರ, ಖೇರ್ಡಾ (ಬಿ), ಹಿರನಾಗಾಂವ್ ಗ್ರಾಮ ಮತ್ತು ನಾಲ್ಕು ತಾಂಡಾ ಬರುತ್ತವೆ. 7 ಸ್ಥಾನ ಖಾಲಿ ಇದ್ದರೂ ಉಳಿದ ಗ್ರಾಮಗಳ 13 ಸದಸ್ಯರು ಸೇರಿ ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯ್ಕೆ ಮಾಡಿದ್ದರು. ಧನ್ನೂರ್ ಗ್ರಾಮದ ಲಕ್ಷ್ಮೀಬಾಯಿ ಅಧ್ಯಕ್ಷೆ ಹಾಗೂ ಹಂದ್ರಾಳ್ ತಾಂಡಾದ ಶಿಲ್ಪಾ ರಾಠೋಡ್ ಉಪಾಧ್ಯಕ್ಷೆಯಾಗಿ 5 ವರ್ಷ ಅವಧಿ ಪೂರ್ಣಗೊಳಿಸಿದ್ದಾರೆ. ಗ್ರಾಪಂ ಕೇಂದ್ರವಂತೂ ಆಗಿಲ್ಲ. ಚುನಾವಣೆ ಅಖಾಡಕ್ಕಿಳಿದು, ಅಧ್ಯಕ್ಷ ಗಾದಿ ತಮ್ಮೂರಿಗೆ ಪಡೆದು ಹೋರಾಟ ಮುಂದುವರಿಸಬೇಕೆಂಬ ಲೆಕ್ಕಾಚಾರ ಸ್ಥಳೀಯರದ್ದಾಗಿದೆ.

ಶಾಸಕರ ನಿಧನ, ಮೆತ್ತಗಾದ ಜನ
ಬಸವಕಲ್ಯಾಣ ಶಾಸಕ ಬಿ. ನಾರಾಯಣರಾವ್ ಅವರ ಅಕಾಲಿಕ ನಿಧನದಿಂದ ಹಿರನಾಗಾಂವ ಜನರು ತಮ್ಮ ಬೇಡಿಕೆಯಿಂದ ಹಿಂದೆ ಸರಿದಿದ್ದಾರೆ. ಕಳೆದ ಗ್ರಾಪಂ ಚುನಾವಣೆ ಬಹಿಷ್ಕರಿಸಿದ್ದ ಗ್ರಾಮಸ್ಥರು ನಂತರದ ಚುನಾವಣೆಯಲ್ಲೂ ಇದನ್ನೇ ಮುಂದುವರಿಸಿದ್ದರು. ಆದರೆ 2018ರ ವಿಧಾನಸಭೆ ಚುನಾವಣೆ ವೇಳೆ ನಾನು ಗೆದ್ದು ಬಂದರೆ ಹಿರನಾಗಾಂವ್ ಗೆ ಗ್ರಾಪಂ ಕೇಂದ್ರ ಸ್ಥಾನ ಕೊಡಿಸುವೆ ಎಂದು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಬಿ. ನಾರಾಯಣರಾವ್ ಭರವಸೆ ನೀಡಿದ್ದರು. ಅವರ ಮಾತಿಗೆ ಮನ್ನಿಸಿ ಜನ ಮತದಾನ ಮಾಡಿದರು. ಕೊಟ್ಟ ಮಾತಿನಂತೆ ನಾರಾಯಣರಾವ್ ಸಹ ಬಹಳಷ್ಟು ಪ್ರಯತ್ನಪಟ್ಟಿದ್ದರು. ಕಳೆದ ಮಾರ್ಚ್ ನಲ್ಲಿ ಪಂಚಾಯತ್ ರಾಜ್ ಸಚಿವ ಈಶ್ವರಪ್ಪ ಅವರಿಗೆ ಗ್ರಾಮಸ್ಥರ ನಿಯೋಗದೊಂದಿಗೆ ನಾರಾಯಣರಾವ್ ಅವರು ಭೇಟಿಯಾಗಿ ಚರ್ಚೆ ನಡೆಸಿದ್ದರು. ಎಲ್ಲ ಪ್ರಕ್ರಿಯೆ ಮುಕ್ತಾಯವಾಗಿದ್ದು, ಹಣಕಾಸು ಇಲಾಖೆ ಅನುಮೋದನೆ ಪಡೆದು ಶೀಘ್ರದಲ್ಲಿ ಆದೇಶ ಹೊರಡಿಸಲಾಗುವುದು ಸಚಿವರು ಸಹ ಭರವಸೆ ನೀಡಿದ್ದರು. ಆದರೆ ಕರೊನಾ ಮಹಾಮಾರಿ ಹಾಗೂ ಶಾಸಕ ನಾರಾಯಣರಾವ್ ನಿಧನದಿಂದ ಬೇಡಿಕೆ ಈಡೇರಲಿಲ್ಲ. ಹೀಗಾಗಿ ಸ್ಥಳೀಯರು ತಮ್ಮ ಬೇಡಿಕೆ ಜತೆಯಲ್ಲೇ ಚುನಾವಣೆಗೂ ಸಜ್ಜಾಗಿದ್ದಾರೆ.

ಕಪ್ಪರಗಾಂವ್ ಗ್ರಾಮಸ್ಥರ ಸರದಿ
ಗ್ರಾಪಂ ಕೇಂದ್ರ ರಚನೆ ಬೇಡಿಕೆ ಮಂಡಿಸಿ ಕಳೆದ ಸಲ ಹಿರನಗಾಂವ್ ಗ್ರಾಮಸ್ಥರು ಚುನಾವಣೆಯಿಂದ ದೂರವುಳಿದರೆ ಈ ಬಾರಿ ಹುಮನಾಬಾದ್ ತಾಲೂಕಿನ ಕಪ್ಪರಗಾಂವ್ ಜನರು ಬಹಿಷ್ಕಾರ ಹಾಕಿದ್ದಾರೆ. ನಂದಗಾಂವ್ ನಿಂದ ತೆಗೆದು ತಮ್ಮೂರಿಗೆ ಗ್ರಾಪಂ ಕೇಂದ್ರ ಮಾಡಬೇಕೆಂಬ ಬೇಡಿಕೆ ಮಂಡಿಸಿ ಕಪ್ಪರಗಾಂವ್ ಗ್ರಾಮಸ್ಥರು ಚುನಾವಣೆಯಿಂದ ದೂರ ಉಳಿದಿದ್ದಾರೆ. ಗ್ರಾಮದಲ್ಲಿರುವ 7 ಸ್ಥಾನಕ್ಕೆ ಒಬ್ಬರೂ ನಾಮಪತ್ರ ಸಲ್ಲಿಸಿಲ್ಲ. ಹೀಗಾಗಿ ಇಲ್ಲಿನ ಎಲ್ಲ ಸ್ಥಾನಗಳು ಖಾಲಿ ಉಳಿದಿವೆ. ನಮ್ಮೂರಿನಲ್ಲಿ ಮುಂಚೆ ಗ್ರಾಪಂ ಕೇಂದ್ರವಿತ್ತು. ಈಗ ಮತ್ತೆ ಗ್ರಾಪಂ ಕೇಂದ್ರ ಮಾಡಿದರೆ ಮಾತ್ರ ಚುನಾವಣೆಯಲ್ಲಿ ಪಾಲ್ಗೊಳ್ಳುತ್ತೇವೆ. ಇಲ್ಲದಿದ್ದರೆ ಬರುವ ಎಲ್ಲ ಚುನಾವಣೆಗಳನ್ನು ಬಹಿಷ್ಕಾರ ಮಾಡುತ್ತೇವೆ ಎಂದು ಸ್ಥಳೀಯರು ಕ್ಷೇತ್ರದ ಶಾಸಕ ರಾಜಶೇಖರ ಪಾಟೀಲ್, ಸಂಸದ ಭಗವಂತ ಖೂಬಾ ಇತರರಿಗೆ ಪತ್ರ ಬರೆದು ತಮ್ಮ ನಿರ್ಧಾರ ತಿಳಿಸಿದ್ದಾರೆ.

ಗ್ರಾಪಂ ಕೇಂದ್ರ ಸ್ಥಾನ ಬೇಡಿಕೆ ಮಂಡಿಸಿ ಚುನಾವಣೆ ಬಹಿಷ್ಕರಿಸಿದರೂ ನಮಗೆ ನ್ಯಾಯ ಸಿಗಲಿಲ್ಲ. ಗ್ರಾಪಂ ಸ್ಥಾನ ಕೊಡುವ ಭರವಸೆ ನೀಡಿದ್ದ ಸ್ಥಳೀಯ ಶಾಸಕ ಬಿ.ನಾರಾಯಣರಾವ್ ಸಹ ಈಗಿಲ್ಲ. ಹೀಗಾಗಿ ಅನಿವಾರ್ಯವಾಗಿ ಈ ಚುನಾವಣೆ ಎದುರಿಸುತ್ತಿದ್ದೇವೆ. ನಮ್ಮ ಹೋರಾಟ ಬರುವ ದಿನಗಳಲ್ಲಿ ಮುಂದುವರಿಯಲಿದೆ.| ಉದಯಕುಮಾರ ರಾಮಬಾಣಹಿರನಾಗಾಂವ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net