ಬಹಿರಂಗ ಪ್ರಚಾರಕ್ಕೆ ಇಂದು ತೆರೆ: ಸಿಂದಗಿಯಲ್ಲಿ ಕಾಂಗ್ರೆಸ್ ನಾಯಕರು, ಹಾನಗಲ್​ನಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅಬ್ಬರ

State Campaign
ಹಾನಗಲ್ ತಾಲೂಕಿನ ಹೀರೂರ ಗ್ರಾಮದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ರೋಡ್ ಶೋ ಮೂಲಕ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಪರ ಮತಯಾಚಿಸಿದರು.
Published on

ಬೆಂಗಳೂರು/ವಿಜಯಪುರ: ಕರೊನಾ ಮೂರನೇ ಅಲೆ ಆತಂಕವನ್ನು ಮರೆಮಾಚಿದ ಹಾನಗಲ್, ಸಿಂದಗಿ ವಿಧಾನಸಭೆ ಕ್ಷೇತ್ರಗಳ ಉಪಸಮರದ ಬಹಿರಂಗ ಪ್ರಚಾರಕ್ಕೆ ಬುಧವಾರ ತೆರೆ ಬೀಳಲಿದೆ. ಎರಡೂ ಕ್ಷೇತ್ರಗಳಿಗೆ ಅ.30ರಂದು ಮತದಾನ ನಡೆಯಲಿದೆ. ಮಾದರಿ ನೀತಿ ಸಂಹಿತೆ ಪ್ರಕಾರ ಮತದಾನಕ್ಕೆ 72 ತಾಸುಗಳ ಮುಂಚೆ ಬಹಿರಂಗ ಪ್ರಚಾರ ಕೊನೆಗೊಳ್ಳಲಿದೆ. ಹೀಗಾಗಿ ಕಳೆದ 15 ದಿನಗಳಿಂದ ಕ್ಷೇತ್ರದಲ್ಲಿ ಬೀಡುಬಿಟ್ಟಿದ್ದ ಹೊರಗಿನವರು ಬುಧವಾರ ಸಂಜೆ ವೇಳೆಗೆ ನಿರ್ಗಮಿಸಬೇಕಿದೆ.

ಹಾನಗಲ್​ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಕ್ಷೇತ್ರದ ಗ್ರಾಮಗಳಲ್ಲಿ ಸಂಚರಿಸಿ ಮತಬೇಟೆ ನಡೆಸಿದರು. ಸಿಂದಗಿ ಕ್ಷೇತ್ರದಲ್ಲಿ ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಚಿವರಾದ ವಿ.ಸೋಮಣ್ಣ, ಗೋವಿಂದ ಕಾರಜೋಳ ಇತರರು ಮತಯಾಚಿಸಿದರು.

ರೋಡ್ ಶೋ ಇಂದು: ಬಹಿರಂಗ ಪ್ರಚಾರದ ಕೊನೇ ದಿನವಾದ ಬುಧವಾರ ಹಾನಗಲ್​ನಲ್ಲಿ ಭರ್ಜರಿ ರೋಡ್ ಶೋಗೆ ಬಿಜೆಪಿ ಪ್ಲಾ್ಯನ್ ಮಾಡಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಜತೆಗೆ ಮಾಜಿ ಸಿಎಂ ಯಡಿಯೂರಪ್ಪ ಪಾಲ್ಗೊಳ್ಳಲಿದ್ದಾರೆ.

ದಲಿತರು ಕಾಂಗೆಸ್ ಬೆನ್ನೆಲುಬು: ಸಿಂದಗಿ ಕಾಂಗ್ರೆಸ್ ಕಚೇರಿಯಲ್ಲಿ ಮಾದಿಗ ಸಮಾವೇಶ ಉದ್ಘಾಟಿಸಿದ ಸಿದ್ದರಾಮಯ್ಯ, ದಲಿತರೆಂದರೆ ಕಾಂಗ್ರೆಸ್. ಕಾಂಗ್ರೆಸ್ ಎಂದರೆ ದಲಿತರು. ಕೆಲವು ದಲಿತ ನಾಯಕರು ತಮ್ಮ ಹೊಟ್ಟೆ ಪಾಡಿಗಾಗಿ ಬಿಜೆಪಿಗೆ ಹೋಗಿದ್ದಾರೆ. ದಲಿತರಿಗೆ ಅವರು ನ್ಯಾಯ ಕೊಡಿಸಲು ಸಮರ್ಥರಲ್ಲ ಎಂದರು.

ಕಾಂಗ್ರೆಸ್​ಗೆ ನೈತಿಕತೆ ಇಲ್ಲ: ಸಿದ್ದರಾಮಯ್ಯ ನಡವಳಿಕೆಯೇ ಬಿಜೆಪಿಗೆ ವರವಾಗಿದೆ. ಇಲ್ಲವಾದರೆ ಬಿಜೆಪಿಗೆ ಇಂದು ರಾಜ್ಯದಲ್ಲಿ ನೆಲೆ ಇರುತ್ತಿರಲಿಲ್ಲ. ಬಿಜೆಪಿ ಗೆಲುವಿಗೆ ಅವರ ಕೊಡುಗೆ ದೊಡ್ಡದು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಿಂದಗಿಯಲ್ಲಿ ಹೇಳಿದರು. ಮಧುಗಿರಿಯ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಹೋರಾಡಿದ್ದು ಬಿಟ್ಟರೆ ಇನ್ನುಳಿದ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಅವರ ಪಾತ್ರ ದೊಡ್ಡದು. ಅದಕ್ಕಾಗಿ ಬಿಎಸ್​ವೈ ಹತ್ತಿರವೇ ಹಣ ಪಡೆದಿದ್ದನ್ನು ಅವರ ಜತೆಗಿದ್ದವರೇ ನನ್ನ ಬಳಿ ಹೇಳಿದ್ದಾರೆ. ಇದು ಸಿದ್ದರಾಮಯ್ಯರ ಜಾತ್ಯತೀತ ನಿಲುವು ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯ ದುರಹಂಕಾರ 2023ಕ್ಕೆ ಕೊನೆಯಾಗಲಿದೆ. 2018ರಲ್ಲಿ ಬಾದಾಮಿಯಲ್ಲಿ ನಾನು ಮಾಡಿದ ತಪ್ಪಿನಿಂದಲೇ ಅವರು ಗೆದ್ದರು. ಆದರೆ 2023ರಕ್ಕೆ ಹಾಗಾಗಲ್ಲ. | ಎಚ್.ಡಿ.ಕುಮಾರಸ್ವಾಮಿ ಮಾಜಿ ಸಿಎಂ

ಪ್ರಶ್ನಿಸುವ ಯೋಗ್ಯತೆಯೂ ಇಲ್ಲ

ಅಕ್ಕಿಆಲೂರ: ಬಿ.ಎಸ್.ಯಡಿಯೂರಪ್ಪ 40 ವರ್ಷಗಳ ಕಾಲ ಹೋರಾಟ ನಡೆಸಿದ್ದಾರೆ. ಅವರಷ್ಟು ಹೋರಾಟಗಳನ್ನು ಕರ್ನಾಟಕದಲ್ಲಿ ಯಾವ ರಾಜಕಾರಣಿಯೂ ಮಾಡಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ಅಕ್ಕಿಆಲೂರ, ಹೀರೂರ, ಕೂಸನೂರ, ಉಪ್ಪಣಸಿ, ಶಿರಗೋಡ, ಗೊಂದಿ, ಬೊಮ್ಮನಹಳ್ಳಿ ಸೇರಿ ವಿವಿಧ ಗ್ರಾಮಗಳಲ್ಲಿ ಮಂಗಳವಾರ ರೋಡ್ ಶೋ ಮೂಲಕ ಪಕ್ಷದ ಅಭ್ಯರ್ಥಿ ಶಿವರಾಜ ಸಜ್ಜನರ ಪರ ಮತಯಾಚಿಸಿ ಅವರು ಮಾತನಾಡಿದರು. ಮುಖ್ಯಮಂತ್ರಿಯಾಗಿದ್ದಾಗ ಯಡಿಯೂರಪ್ಪ ಭಾಗ್ಯಲಕ್ಷ್ಮೀ, ಸಂಧ್ಯಾ ಸುರಕ್ಷಾ ಸೇರಿ ಹಲವಾರು ಜನಪರ ಯೋಜನೆಗಳನ್ನು ನೀಡಿದ್ದಾರೆ. ಆದರೆ, ಕಾಂಗ್ರೆಸ್​ನವರು ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಕೆಲಸ ಮಾಡಿದರು. ಯಡಿಯೂರಪ್ಪ ನೀಡಿದಂತಹ ಕಾರ್ಯಕ್ರಮಗಳನ್ನು ಅವರು ನೀಡಲಿಲ್ಲ. ಬಿಜೆಪಿ ಜನತೆಗೆ ಏನು ಮಾಡಿದೆ ಎಂದು ಕೇಳುವ ಯೋಗ್ಯತೆಯೂ ಕಾಂಗ್ರೆಸ್ಸ್​ನವರಿಗಿಲ್ಲ. ಯಡಿಯೂರಪ್ಪ ರಾಜೀನಾಮೆ ನೀಡಿ ಬೊಮ್ಮಾಯಿ ಸಿಎಂ ಮಾಡಿದರು ಎಂದರು.

ಕಾಂಗ್ರೆಸ್​ನಿಂದ ಮತಬ್ಯಾಂಕ್ ರಾಜಕೀಯ

ಹಾವೇರಿ: ಪ್ರಜಾಪ್ರಭುತ್ವದಲ್ಲಿ ಮತಬ್ಯಾಂಕ್ ಪರಿಕಲ್ಪನೆಯೇ ತಪ್ಪು. ಮುಗ್ದ ಹಿಂದುಳಿದ ಸಮುದಾಯಗಳ ಸಮಸ್ಯೆಗಳನ್ನು ಬಂಡವಾಳವಾಗಿಸಿ ಕೊಂಡು ಚುನಾವಣೆ ನಡೆಸುವ ಅವ್ಯವಸ್ಥೆಯನ್ನು ಕಾಂಗ್ರೆಸ್ ತಂದಿದೆ. ಇದರಿಂದಾಗಿ ಸಾಮಾಜಿಕ ಸಾಮರಸ್ಯ ಕದಡುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಹಾನಗಲ್ ತಾಲೂಕು ಗಡಿಯಂಕನಹಳ್ಳಿ ಸಮೀಪದ ವಂಶಿ ಫಾಮ್ರ್ ಹೌಸ್​ನಲ್ಲಿ ಭೋವಿ ಸಮುದಾಯದ ಸಭೆ ನಡೆಸಿ ಮಾತನಾಡಿದರು. ಹಿಂದುಳಿದ ಸಮುದಾಯಗಳನ್ನು ಮುಖ್ಯವಾಹಿನಿಗೆ ತರುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ. ಶಿಕ್ಷಣ, ಉದ್ಯೋಗ ಹಾಗೂ ವಿವಿಧ ಅವಕಾಶಗಳಿಂದ ವಂಚಿತ ಸಮುದಾಯಗಳನ್ನು ಕ್ಷೇತ್ರದಲ್ಲಿ ಮುಖ್ಯವಾಹಿನಿಗೆ ತರುವುದೇ ನನ್ನ ಗುರಿ. ಚುನಾವಣೆ ಸಂದರ್ಭ ಜಾತಿ, ಧರ್ಮದ ದಾಳ ಉರುಳಿಸಿ ಮತ ಕೇಳುವ ಅವಿವಾರ್ಯತೆ ಕಾಂಗ್ರೆಸ್​ಗೆ ಬಂದಿದೆ. ಆ ಪಕ್ಷ ಚುನಾವಣೆಗಳಲ್ಲಿ ಸಮಾಜದ ಅಭಿವೃದ್ಧಿ ಬಗ್ಗೆ ಮಾತನಾಡುವುದಿಲ್ಲ. ಅವರಿಗೆ ಬೇಕಾಗಿರುವುದು ಸಮುದಾಯಗಳಿಂದ ಮತ ಹಾಕಿಸಿ ಕೊಂಡು ಅಧಿಕಾರ ಅನುಭವಿಸುವುದಷ್ಟೇ ಎಂದರು.

ಉಪಚುನಾವಣೆ ಸುಳ್ಳಿಗೂ ಸತ್ಯಕ್ಕೂ ನಡುವೆ ನಡೆಯುವ ಧರ್ಮಯುದ್ಧವಾಗಿದೆ. ಬಿಜೆಪಿ ಸುಳ್ಳಿನ ಮೇಲೆ ಮನೆ ಕಟ್ಟುವ ಕೆಲಸ ಮಾಡುತ್ತಿದೆ. ಪಿಕ್ ಪಾಕೆಟ್ ಮಾಡುತ್ತಿರುವ ಸರ್ಕಾರಕ್ಕೆ ಸೂಕ್ತ ಉತ್ತರ ಕೊಡುವ ಸಮಯ ಬಂದಿದೆ.| ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

ಉಪ ಸಮರ ಬಳಿಕ ಸಮಾವೇಶ

ಬೆಂಗಳೂರು: ಉಪ ಚುನಾವಣೆ ಬಳಿಕ ರಾಜ್ಯ ಮಟ್ಟದ ಬೃಹತ್ ಸಮಾವೇಶ ನಡೆಸಲು ಜೆಡಿಎಸ್ ಮುಂದಾಗಿದೆ. ಸಮಾವೇಶ ನಡೆಸುವ ಮೂಲಕ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಸೇರಿ ಎಲ್ಲ ಸ್ಥಳೀಯ ಹಂತದ ಚುನಾವಣೆಗಳಿಗೆ ಕಾರ್ಯಕರ್ತರನ್ನು ಹುರಿದುಂಬಿಸಿ, ಅವರಿಗೆ ಶಕ್ತಿ ತುಂಬಲು ಈ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ಸಿಎಂ ಹುದ್ದೆಯಿಂದ ಎಚ್.ಡಿ.ಕುಮಾರಸ್ವಾಮಿ ಕೆಳಗಿಳಿದು 2 ವರ್ಷ ದಾಟಿದ್ದು, ಈ ಅವಧಿಯಲ್ಲಿ ಜೆಡಿಎಸ್ ಕಾರ್ಯಕರ್ತರನ್ನು ಸಕ್ರಿಯವಾಗಿ ಹಿಡಿದಿಟ್ಟು ಪಕ್ಷದ ಕಾರ್ಯಕ್ರಮಗಳಿಗೆ ಬಳಸಿಕೊಳ್ಳುವ ಮೂಲಕ ಸಂಘಟನೆ ಬಳಪಡಿಸಿಕೊಳ್ಳುವ ಪ್ರಯತ್ನಗಳು ನಡೆದಿಲ್ಲ. ಕೋವಿಡ್ ಕಾರಣದಿಂದಲೂ ದೊಡ್ಡ ಪ್ರಮಾಣದ ಸಮಾವೇಶ ಸಂಘಟಿಸಲೂ ಸಾಧ್ಯವಾಗಿಲ್ಲ. ಈಗ ಕೋವಿಡ್ ಅಬ್ಬರ ಕಡಿಮೆಯಾಗಿರುವ ಕಾರಣ, ಸಮಾವೇಶ ನಡೆಸಲು ತೀರ್ವನಿಸಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ. ಬೆಂಗಳೂರಿನಲ್ಲಿಯೇ ಸಮಾವೇಶ ನಡೆಯಲಿದ್ದು, ಬಳಿಕ ವಿಭಾಗವಾರು ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net