ಬಹಿರಂಗ ಚರ್ಚೆಗೆ ಪಂಥಾಹ್ವಾನ

Bidar MP
Published on

ಬೀದರ್: ವೀರಶೈವ-ಲಿಂಗಾಯತ ಹೆಸರಿನಲ್ಲಿ ಸುದೀರ್ಘ ಅವಧಿಯಿಂದ ರಾಜಕೀಯ ಮಾಡುತ್ತ ಬಂದಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು ಬಸವಕಲ್ಯಾಣ ಅನುಭವ ಮಂಟಪ ಮತ್ತು ಬಸವ ಭಕ್ತರಿಗೆ ನೀಡಿರುವ ಕೊಡುಗೆ ಏನು ಎಂಬುದನ್ನು ಬಹಿರಂಗಪಡಿಸಲಿ. ಈ ಬಗ್ಗೆ ಬಹಿರಂಗ ಚರ್ಚೆಗೂ ನಾನು ಸಿದ್ಧ ಎಂದು ಸಂಸದ ಭಗವಂತ ಖೂಬಾ ಘೋಷಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಇತ್ತೀಚೆಗೆ ಬಸವಕಲ್ಯಾಣ ಅನುಭವ ಮಂಟಪಕ್ಕೆ ಭೇಟಿ ನೀಡಿದ ಬಗ್ಗೆ ಖಂಡ್ರೆ ಲೇವಡಿ ಮಾಡಿದ್ದರು. ಚುನಾವಣೆ ಬಂದಾಗ ಅನುಭವ ಮಂಟಪ ನೆನಪಾಗಿದೆಯೇ ಎಂದು ಪ್ರಶ್ನಿಸಿದ್ದರು. ನೀವು ಸುದೀರ್ಘ ಅವಧಿ ವೀರಶೈವ-ಲಿಂಗಾಯತ ಹೆಸರಿನಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದೀರಿ. ನೀವಾಗಲಿ, ನಿಮ್ಮ (ಕಾಂಗ್ರೆಸ್) ಸರ್ಕಾರವಾಗಲಿ ಅನುಭವ ಮಂಟಪಕ್ಕೆ ಏನು ಕೊಟ್ಟಿದೆ ಎಂಬುದನ್ನು ಸಾರ್ವಜನಿಕವಾಗಿ ತಿಳಿಸಿ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಭಾಲ್ಕಿ ವಸತಿ ಯೋಜನೆ ಅಕ್ರಮ ಬಗ್ಗೆ ಕಟೀಲ್ ಅವರು ಎಲ್ಲವೂ ತಿಳಿದುಕೊಂಡೇ ಖಂಡ್ರೆ ವಿರುದ್ಧ ಆರೋಪ ಮಾಡಿದ್ದಾರೆ. ಈ ಅಕ್ರಮ ಹಾಗೂ ಅನುಭವ ಮಂಟಪಕ್ಕೆ ಅಧಿಕ ಅನುದಾನ ಯಾವ ಸರ್ಕಾರ ನೀಡಿದೆ ಎಂಬ ಬಗ್ಗೆ ಬಹಿರಂಗ ಚರ್ಚೆಗೆ ನಾನು ಸಿದ್ಧ. ದಿನಾಂಕ, ಸಮಯ ಹಾಗೂ ಸ್ಥಳ ನೀವೇ ನಿರ್ಧರಿಸಿ ಎಂದು ಖಂಡ್ರೆ ಅವರಿಗೆ ಸವಾಲು ಹಾಕಿದರು.

ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಈಶ್ವರ ಖಂಡ್ರೆ ಜಿಲ್ಲಾ ಉಸ್ತುವಾರಿ ಸಚಿವರಿದ್ದರು. ಆಗ ಅನುಭವ ಮಂಟಪಕ್ಕಾಗಿ ಏನೂ ಮಾಡಿಲ್ಲ. ಅನುದಾನಕ್ಕಾಗಿ ನಿಯೋಗ ಒಯ್ದರೆ ಅಂದಿನ ಸಿಎಂ ಸಿದ್ದರಾಮಯ್ಯ ಕ್ಯಾರೆ ಎನ್ನಲಿಲ್ಲ. ರಾಹುಲ್ ಗಾಂಧಿ ಅವರನ್ನು ಅನುಭವ ಮಂಟಪಕ್ಕೆ ಕರೆತಂದು ಹಣ ಮಂಜೂರಿ ಮಾಡಿಸುವ ಆಶ್ವಾಸನೆ ಸಹ ಹುಸಿಯಾಯಿತು. ಅನುಭವ ಮಂಟಪಕ್ಕೆ ನೀವೇನು ಮಾಡಿದ್ದೀರಿ? ಎಷ್ಟು ಅನುದಾನ ಕೊಟ್ಟಿದ್ದೀರಿ? ಬಸವ ಭಕ್ತರಿಗೆ ನಿಮ್ಮ ಕೊಡುಗೆ ಏನಿದೆ ಎಂಬುದನ್ನು ತಿಳಿಸಬೇಕು. ನಾವು (ಬಿಜೆಪಿ ಸರ್ಕಾರ) ಏನು ಮಾಡಿದ್ದೇವೆ ಎಂಬುದನ್ನು ತಿಳಿಸುತ್ತೇವೆ. ಇದರೊಂದಿಗೆ ಭಾಲ್ಕಿ ವಸತಿ ಹಗರಣ, ರೈತರ ಮೂರು ಹೊಸ ಕಾಯ್ದೆ ಬಗ್ಗೆಯೂ ಚರ್ಚಿಸೋಣ. ಇದಕ್ಕಾಗಿ ನಾನು ಬಹಿರಂಗ ಚರ್ಚೆ ಮಾಡಲು ತಯಾರಿದ್ದೇನೆ ಎಂದರು.

ಬಿಜೆಪಿ ಸರ್ಕಾರದ ಚರ್ಮ ದಪ್ಪವಾಗಿದೆ ಎಂದು ಖಂಡ್ರೆ ಆರೋಪಿಸಿದ್ದು ಹಾಸ್ಯಾಸ್ಪದ. ಯಾರ ಚರ್ಮ ದಪ್ಪಾಗಿದೆ ಎಂಬುದು ಜನರಿಗೆ ಗೊತ್ತಿದೆ. ಖಂಡ್ರೆ ಮಹಾ ಸುಳ್ಳುಗಾರರು ಎಂದು ಟಾಂಗ್ ನೀಡಿದರು. ಎಂಎಲ್ಸಿ ರಘುನಾಥರಾವ ಮಲ್ಕಾಪುರೆ, ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್ ಇತರರಿದ್ದರು.

ಪಟ್ಟದ್ದೇವರಿಗೆ ಪಟ್ಟ
ತಪ್ಪಿಸಲು ಕುತಂತ್ರ

ಲಿಂಗೈಕ್ಯ ಶ್ರೀ ಡಾ.ಚನ್ನಬಸವ ಪಟ್ಟದ್ದೇವರು ಸ್ವತಃ ತಲೆ ಮೇಲೆ ಕಲ್ಲು, ಮಣ್ಣು ಹೊತ್ತು ಬಸವಕಲ್ಯಾಣದಲ್ಲಿ ಆಧುನಿಕ ಅನುಭವ ಮಂಟಪ ನಿರ್ಮಿಸಿದ್ದರು. ಪೂಜ್ಯರ ಲಿಂಗೈಕ್ಯದ ನಂತರ ಅನುಭವ ಮಂಪಟ ಅಧ್ಯಕ್ಷ ಸ್ಥಾನ ಅವರ ಉತ್ತರಾಧಿಕಾರಿ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಅಲಂಕರಿಸಬೇಕಿತ್ತು. ಆದರೆ ಅವರನ್ನು ಈ ಸ್ಥಾನಕ್ಕೆ ಕೂಡಲು ಬಿಡಲಿಲ್ಲ. ಸುದೀರ್ಘ ಕಾಲ ಈ ಅವಕಾಶ ತಪ್ಪಿಸಲು ಕುತಂತ್ರ ನಡೆಸಿದ ಅಪಕೀರ್ತಿ ಖಂಡ್ರೆ ಕುಟುಂಬಕ್ಕೆ ಸಲ್ಲುತ್ತದೆ ಎಂದು ಖೂಬಾ ಗಂಭೀರ ಆರೋಪ ಹೊರಿಸಿದರು.

ರಿಂಗ್ ರೋಡ್ ಕಾಮಗಾರಿ
ಅಪೂರ್ಣಕ್ಕೆ ಖಂಡ್ರೆ ಹೊಣೆ

ಬೀದರ್ ಹೊರವಲಯದ ರಿಂಗ್ ರೋಡ್ ಕಾಮಗಾರಿ ಅಪೂರ್ಣವಾಗಿರಲು ಈಶ್ವರ ಖಂಡ್ರೆ ನೇರ ಹೊಣೆಗಾರರು ಎಂದು ಸಂಸದ ಭಗವಂತ ಖೂಬಾ ದೂರಿದರು. ಕಾಂಗ್ರೆಸ್ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಖಂಡ್ರೆ ಅವರು ಚಿಕ್ ಪೇಟ ದಿಂದ ಅಲಿಯಾಬಾದ್ ಕಡೆ ರಿಂಗ್ ರೋಡ್ ಕಾಮಗಾರಿ ಗುತ್ತಿಗೆ ವಿನಾಕಾರಣ ರದ್ದುಪಡಿಸಿದ್ದಾರೆ. ಇದಕ್ಕೆ ಒದಗಿಸಿದ್ದ ಹಣ ಬೇರೆಡೆ ವರ್ಗ ಮಾಡಿದ್ದಾರೆ. ಹೀಗಾಗಿ ಆ ಕೆಲಸ ಇಂದಿಗೂ ನನೆಗುದಿಗೆ ಬಿದ್ದಿದೆ. ನಿಮಗೆ ಗುತ್ತಿಗೆದಾರರು ಮುಖ್ಯವೋ? ಸಾರ್ವಜನಿಕರ ಹಿತ ಮತ್ತು ಅಭಿವೃದ್ಧಿ ಕಾರ್ಯ ಮುಖ್ಯವೋ ಎಂಬುದನ್ನು ಖಂಡ್ರೆ ಜನರಿಗೆ ತಿಳಿಸಲಿ ಎಂದರು. ಭಾಲ್ಕಿ ತಾಲೂಕಿನಲ್ಲಿ ತಮ್ಮ ಹಿತೈಷಿ ಗುತ್ತಿಗೆದಾರರಿಗೆ ಮಾತ್ರ ಕೆಲಸ ಕೊಡುವುದು ನಡೆದುಕೊಂಡು ಬರುತ್ತಿದೆ. ತಮ್ಮವರಿಗೆ ಕೆಲಸ ಸಿಗದಿದ್ದಲ್ಲಿ ಆ ಗುತ್ತಿಗೆದಾರರಿಗೆ ಸತಾಯಿಸುವ, ಕಿರಿಕಿರಿ ನೀಡುವ ಕೆಲಸ ಕ್ಷೇತ್ರದ ಶಾಸಕರಾಗಿರುವ ಖಂಡ್ರೆ ಮಾಡುತ್ತಿದ್ದಾರೆ. ಸಮಯ ಬಂದಾಗ ನಾನು ಇದನ್ನು ಸಾಬೀತುಪಡಿಸುವೆ ಎಂದು ಖೂಬಾ ಹೇಳಿದರು.

ನೋಟಿಸ್ ಗೆ ತಕ್ಕ ಉತ್ತರ
ಭಾಲ್ಕಿ ವಸತಿ ಅಕ್ರಮ ಸಂಬಂಧ ಶಾಸಕ ಈಶ್ವರ ಖಂಡ್ರೆ ನನಗೆ ನೀಡಿದ್ದ ಲೀಗಲ್ ನೋಟಿಸ್ ಗೆ ತಕ್ಕ ಉತ್ತರ ಕೊಟ್ಟಿರುವೆ ಎಂದು ಸಂಸದ ಭಗವಂತ ಖೂಬಾ ಹೇಳಿದರು. ವಸತಿ ಯೋಜನೆಯಲ್ಲಿ ಅಕ್ರಮ ನಡೆದಿಲ್ಲದಿದ್ದರೂ ಸಾರ್ವಜನಿಕವಾಗಿ ಪದೇಪದೆ ನನ್ನ ಹೆಸರು ಪ್ರಸ್ತಾಪಿಸಿದ್ದರಿಂದ ನೊಂದಿದ್ದೇನೆ. ನನಗೆ ನಿದ್ದೆ ಬರುತ್ತಿಲ್ಲ. ಒಂದು ವೇಳೆ ಸಾರ್ವಜನಿಕವಾಗಿ ಕ್ಷಮೆಯಾಚಿಸದಿದ್ದಲ್ಲಿ ಮೊಕದ್ದಮೆ ಹೂಡಬೇಕಾಗುತ್ತದೆ ಎಂದು ಖಂಡ್ರೆ ಅವರು ತಮ್ಮ ವಕೀಲರ ಮೂಲಕ ನೋಟಿಸ್ ನೀಡಿದ್ದರು. ಇದಕ್ಕೆ ನಾನೇ ಉತ್ತರ ನೀಡಿರುವೆ ಎಂದು ತಿಳಿಸಿದರು. ಆರು ದಶಕಗಳಿಂದ ನೀವು ಮಾಡಿರುವ ಮೋಸದ ಬಗ್ಗೆ ಇದೀಗ ಅರಿವಾಗಿ ನಿದ್ದೆ ಬರುತ್ತಿಲ್ಲ. ಒಂದು ವೇಳೆ ನೀವು ನನ್ನ ಮೇಲೆ ಮೊಕದ್ದಮೆ ಹೂಡಬೇಕೆಂದರೆ ನನ್ನದೇನೂ ಅಭ್ಯಂತರ ಇಲ್ಲ. ನಾನು ನ್ಯಾಯಾಲಯದಲ್ಲಿ ಸಮರ್ಥವಾಗಿ ಎದುರಿಸಲು ಸಿದ್ಧನಿದ್ದೇನೆ ಎಂದು ಉತ್ತರ ಕೊಟ್ಟಿದ್ದೇನೆ ಎಂದರು. ನೋಟಿಸ್ ನೀಡಿದರೆ ನಾನು ಹಾಗೂ ಬಿಜೆಪಿಯ ಯಾವ ಕಾರ್ಯಕರ್ತರೂ ಹೆದರುವುದಿಲ್ಲ. ನಮ್ಮ ಹೋರಾಟ ಭ್ರಷ್ಟಾಚಾರದ ವಿರುದ್ಧ ನಿರಂತರ ನಡೆಯಲಿದೆ. ವಸತಿ ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಜರುಗುವವರೆಗೆ ಸುಮ್ಮನಿರುವುದಿಲ್ಲ ಎಂದು ಖೂಬಾ ಸ್ಪಷ್ಟಪಡಿಸಿದರು.

ಯಡಿಯೂರಪ್ಪ ಸಿಎಂ ಆದ ನಂತರ ಬೀದರ್ ರಂಗಮಂದಿರಕ್ಕೆ ಡಾ.ಚನ್ನಬಸವ ಪಟ್ಟದ್ದೇವರ ಹೆಸರಿಟ್ಟರು. ಅನುಭವ ಮಂಟಪಕ್ಕೆ 500 ಕೋಟಿ ರೂ. ಒದಗಿಸಿ 100 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಇದಕ್ಕಾಗಿ ವಿಶೇಷ ಅಧಿಕಾರಿಯನ್ನೂ ನೇಮಿಸಿದ್ದಾರೆ. ಇದು ಬಸವ ಭಕ್ತರಿಗೆ ಬಿಜೆಪಿ ನೀಡಿದ ಕೊಡುಗೆ.| ಭಗವಂತ ಖೂಬಾ ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net