ಬಹಿರಂಗ ಚರ್ಚೆಗೆ ಒಪ್ಪಿದ ಖೂಬಾ

Bidar MP
Published on

ಬೀದರ್: ಭಾಲ್ಕಿ ವಸತಿ ಯೋಜನೆಯ ಅಕ್ರಮ, ಅನುಭವ ಮಂಟಪ ಅನುದಾನ ಹಾಗೂ ಇತರೆ ವಿಷಯಗಳ ಕುರಿತು ಬಹಿರಂಗ ಚರ್ಚೆಗೆ ಬರುವಂತೆ ಭಾಲ್ಕಿ ಶಾಸಕರಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು ನಿಗದಿಪಡಿಸಿದ ದಿನಾಂಕವನ್ನು ಸಂಸದ ಭಗವಂತ ಖೂಬಾ ಒಪ್ಪಿಕೊಂಡಿದ್ದಾರೆ.

ಬಹಿರಂಗ ಚರ್ಚೆಗೆ ಮೊದಲು ಸಂಸದ ಖೂಬಾ ಅವರು ಆಹ್ವಾನಿಸಿದ್ದರು. ಇದಕ್ಕೆ ಶಾಸಕ ಖಂಡ್ರೆ ಅವರು ಒಪ್ಪಿ, ನ.5ರಂದು ಬೆಳಗ್ಗೆ 11ಕ್ಕೆ ನಗರದ ಪೂಜ್ಯ ಡಾ. ಚನ್ನಬಸವ ಪಟ್ಟದೇವರ ರಂಗಮಂದಿರ ಅಥವಾ ಗಣೇಶ ಮೈದಾನದಲ್ಲಿ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದ್ದರು. ಈಗ ಖೂಬಾ ಅವರು ಸಹ ಇದಕ್ಕೆ ಸಹಮತ ವ್ಯಕ್ತಪಡಿಸಿ ಚರ್ಚೆಗೆ ಓಕೆ ಎಂದಿದ್ದಾರೆ. ಹೀಗಾಗಿ ಸಂಸದ-ಶಾಸಕರ ಟಾಕ್ ವಾರ್ಗೆ ವೇದಿಕೆ ಸಜ್ಜಾಗುತ್ತಿದೆ.

ಬಹಿರಂಗ ಚರ್ಚೆ ಸಂಬಂಧ ಸಂಸದ ಖೂಬಾ ಅವರು ನೇರವಾಗಿ ಈಶ್ವರ ಖಂಡ್ರೆ ಅವರಿಗೆ ಪತ್ರ ಬರೆದು, ನೀವು ಆಹ್ವಾನಿಸದಂತೆ ಬಹಿರಂಗ ಚರ್ಚೆಗೆ ನಾನು ಒಪ್ಪಿರುವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಿನ್ನ ವಿಚಾರಗಳ ನಡುವೆಯೂ ಈ ಚರ್ಚೆ ಮಾದರಿಯಾಗಲೆಂದು ಎಂದು ನಾನು ಆಶಿಸುತ್ತೇನೆ ಎಂದು ತಿಳಿಸಿದ್ದಾರೆ.

ಚರ್ಚೆಯಲ್ಲಿ ಭ್ರಷ್ಟಚಾರ, ಸ್ವಜನಪಕ್ಷಪಾತ, ಮನೆ ಹಗರಣ, ಬ್ರಿಮ್ಸ್ ಆಸ್ಪತ್ರೆ ಅವ್ಯವಹಾರ, ಶಾಂತಿವರ್ಧಕ ಶಿಕ್ಷಣ ಸಂಸ್ಥೆ, ಹಿರೇಮಠ ಸಂಸ್ಥಾನ ಭಾಲ್ಕಿ, ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ, ಮಹಾತ್ಮಗಾಂಧಿ ಸಹಕಾರ ಸಕ್ಕರೆ ಕಾರ್ಖಾನೆ, ಅನುಭವ ಮಂಟಪ, ವೀರಶೈವ ಲಿಂಗಾಯತರ ವಿಷಯ, ಜಿಲ್ಲೆಯ ಅಭಿವೃದ್ಧಿ ಹಾಗೂ ಇತರೆ ವಿಷಯಗಳ ಬಗ್ಗೆ ಚರ್ಚಿಸೋಣ. ನಿಮ್ಮ ಎಲ್ಲ ವಿಷಯಗಳಿಗೆ ಉತ್ತರಿಸಲು ನಾನು ಸಿದ್ಧಿನಿದ್ದೇನೆ. ನನ್ನ ಸವಾಲುಗಳಿಗೆ ಉತ್ತರಿಸಲು ನೀವು ಸಿದ್ಧರಾಗಿ ಬನ್ನಿ ಎಂದು ಹೇಳಿದ್ದಾರೆ.

ಚರ್ಚೆಗೆ ಆಮಂತ್ರಣ ಪತ್ರಿಕೆ ಮುದ್ರಿಸೋಣ. ಪ್ರೇಕ್ಷಕರಾಗಿ ಜಿಲ್ಲೆಯ ಎಲ್ಲ ಶಾಸಕರು, ಮಾಜಿ ಶಾಸಕರು, ಜಿಪಂ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರು, 2018ರ ವಿಧಾನಸಭೆ ಚುನಾವಣೆಯಲ್ಲಿ ಎರಡನೇ ಸ್ಥಾನ ಪಡೆದ ಅಭ್ಯರ್ಥಿ, ಮಹಿಳಾ ಜನಪ್ರತಿನಿಧಿಗಳು, ಸಮಾಜದ ಮುಖಂಡರು, ಸಹಕಾರ ಧುರಿಣರು, ಧಾರ್ಮಿಕ ಗುರುವೃಂದದವರು, ಪ್ರಾಂಶುಪಾಲರು, ರಾಜಕೀಯ ಮುಖಂಡರು, ಎನ್.ಜಿ.ಓಗಳ ಮುಖ್ಯಸ್ಥರು, ನಿವೃತ್ತ ಹಿರಿಯ ಅಧಿಕಾರಿಗಳು, ಉದ್ಯಮಿಗಳು, ವಿವಿಧ ಸಂಘಗಳ ಮುಖ್ಯಸ್ಥರು, ಕನ್ನಡಪರ ಸೇರಿದಂತೆ ನಾನಾ ಸಂಘ ಸಂಸ್ಥೆ ಪ್ರಮುಖರು,ಗೌರವಾನ್ವಿತ ಪ್ರಶಸ್ತಿಗೆ ಭಾಜನರಾದವರು ಮತ್ತು ಮಾಧ್ಯಮದವರಿಗೆ ಆಹ್ವಾನಿಸಿ ಅರ್ಥಪೂರ್ಣವಾಗಿ ಚರ್ಚಿಸೋಣ. ಕರೊನಾ ಹಿನ್ನೆಲೆಯಲ್ಲಿ ಪರಸ್ಪರ ಅಂತರ ಕಾಪಾಡಿಕೊಂಡು ಎಲ್ಲರ ಸಮ್ಮುಖ ಸುವ್ಯವಸ್ಥಿತ ವೇದಿಕೆಯಲ್ಲಿ ಚರ್ಚೆ ನಡೆಸೋಣ. ಇದಕ್ಕೆ ಬರುವ ವೆಚ್ಚದಲ್ಲಿ ನಾನೂ ಅರ್ಧ ಭರಿಸುವೆ ಎಂದು ತಿಳಿಸಿದ್ದಾರೆ.

ಸುಸೂತ್ರ ಚರ್ಚೆಗಿರಲಿ ಸಮಿತಿ
ಬಹಿರಂಗ ಚರ್ಚೆ ಸುಸೂತ್ರ ನಡೆಯಲು ಹಿರಿಯ ಶಾಸಕ ಬಂಡೆಪ್ಪ ಖಾಶೆಂಪುರ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸೋಣ ಎಂಬ ಸಲಹೆ ಖೂಬಾ ನೀಡಿದ್ದಾರೆ. ಜಿಲ್ಲೆಯ ಎಲ್ಲ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರನ್ನು ಸಮಿತಿಗೆ ಸದಸ್ಯರನ್ನಾಗಿ ನೇಮಿಸುವುದು ಉತ್ತಮ. ಚರ್ಚೆ ನಮ್ಮಿಬ್ಬರ ಸಂಯುಕ್ತಾಶ್ರಯದಲ್ಲಿ ನಡೆಯಲಿ. ಚರ್ಚೆ ನಡೆಯುವ ಸಮಯದಲ್ಲಿ ಸಮಯ ಪರಿಪಾಲನೆ, ವಿಷಯಗಳು ದಾರಿ ತಪ್ಪದಂತೆ ನೋಡಿಕೊಳ್ಳಲು ಒಬ್ಬ ಮಧ್ಯಸ್ಥಗಾರರನ್ನು ನೇಮಿಸಲು ತಿಳಿಸಿದ್ದಾರೆ.

ಭಾಲ್ಕಿ ತಾಲೂಕಿನಲ್ಲಿ 2013-18 ರವರೆಗಿನ ವಸತಿ ಹಂಚಿಕೆಯಲ್ಲಿ ಅಕ್ರಮ ನಡೆಸಿ ಶಾಸಕ ಈಶ್ವರ ಖಂಡ್ರೆ ಅವರು ಬಡವರ ಮೇಲೆ ಪಾಪ ಎಸಗಿದ್ದಾರೆ. ಇಂದು ಅನೇಕ ಬಡವರು ತೊಂದರೆ ಅನುಭವಿಸುತ್ತಿರುವುದಕ್ಕೆ ಅವರೇ ಕಾರಣರು. ಇದಕ್ಕೆ ಉತ್ತರವನ್ನೂ ಅವರೇ ನೀಡಬೇಕು.| ಭಗವಂತ ಖೂಬಾ, ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net