ಬಸ್'ನಲ್ಲಿ ಪುರುಷರಿಗೆ ಮೀಸಲು ಆಸನ..!

ksrtc
Published on

ಮೈಸೂರು: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪುರುಷರಿಗೂ ಆಸನ ಮೀಸಲು ಕಲ್ಪಿಸಿಕೊಡಲಾಗಿದೆ. ಒಂದು ವೇಳೆ, ಈ ಆಸನಗಳಲ್ಲಿ ಮಹಿಳೆಯರು ಕುಳಿತುಕೊಂಡಿದ್ದರೆ ಅವರನ್ನು ಎಬ್ಬಿಸಿ ಪುರುಷರು ಆಸೀನವಾಗಲು ಅವಕಾಶ ಕಲ್ಪಿಸಿಕೊಡಲಾಗಿದೆ.

ಇಂತಹವೊಂದು ಆದೇಶವನ್ನು ಕೆಎಸ್‌ಆರ್‌ಟಿಸಿ ಮೈಸೂರು ನಗರ ವಿಭಾಗದಿಂದ ಆದೇಶ ಹೊರಡಿಸಲಾಗಿದೆ.

ಮೈಸೂರು ನಗರ ಸಾರಿಗೆ ವಾಹನಗಳಲ್ಲಿ ಪುರುಷರಿಗೆ ಮೀಸಲಿರುವ ಆಸನಗಳಲ್ಲಿ ಮಹಿಳಾ ಪ್ರಯಾಣಿಕರು ಕುಳಿತುಕೊಳ್ಳುತ್ತಿದ್ದಾರೆ. ಇದರಿಂದಾಗಿ ಪ್ರಯಾಣಿಕರಿಗೆ ಆಸನಗಳು ದೊರೆಯುತ್ತಿಲ್ಲ. ಈ ಕುರಿತು ದೂರು ಬಂದಿರುವ ಕಾರಣಕ್ಕೆ ಈ ಆದೇಶ ಹೊರಬಿದ್ದಿದೆ.

ಮೈಸೂರು ನಗರ ಸಾರಿಗೆ ಬಸ್‌ಗಳಲ್ಲಿ ಪುರುಷರಿಗೆ ಮೀಸಲಿರುವ ಆಸನಗಳಲ್ಲಿ ಮಹಿಳೆಯರು ಕೂರುವಂತಿಲ್ಲ. ಒಂದು ವೇಳೆ ಕುಳಿತಿದ್ದರೆ ಪುರುಷರಿಗೆ ಬಿಟ್ಟುಕೊಡುವಂತೆ ಕ್ರಮವಹಿಸಬೇಕು ಎಂದು ನಗರದ ವಿಭಾಗದ ಎಲ್ಲ ಘಟಕಗಳ ವಿಭಾಗದ ವ್ಯವಸ್ಥಾಪಕರಿಗೆ ಸೂಚಿಸಲಾಗಿದೆ.

ಮೈಸೂರು ನಗರ ಬಸ್‌ನ ಮುಂದಿನ ದ್ವಾರದಲ್ಲಿ ಮಹಿಳೆಯರಷ್ಟೇ ಏರಬೇಕು.

ಬಸ್‌ನ ಮುಂದಿನ ಆಸನಗಳಲ್ಲಿ ಮಹಿಳೆಯರೇ ಕೂರಬೇಕು. ಉಳಿದ ಹಿಂಬದಿಯ ಆಸನಗಳನ್ನು ಸಾಮಾನ್ಯ ಗೊಳಿಸಲಾಗಿದೆ. ಆದರೆ ಮೈಸೂರು ನಗರ ವಿಭಾಗೀಯ ನಿಯಂತ್ರಣಾಧಿಕಾರಿ ಬಸ್‌ಗಳಲ್ಲಿ ಪುರುಷರಿಗೆ ಮೀಸಲಿಟ್ಟಿರುವ ಆಸನಗಳಲ್ಲಿ ಪುರುಷ ಪ್ರಯಾಣಿಕರು ಕುಳಿತು ಪ್ರಯಾಣ ಮಾಡಲು ಕ್ರಮಕೈಗೊಳ್ಳುವಂತೆ ಸೂಚಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

ಶಕ್ತಿ ಯೋಜನೆ ಜಾರಿಯಾದ ಬಳಿಕ ಬಹುತೇಕ ಸಾರಿಗೆ ಸಾಮಾನ್ಯ ಬಸ್‌ಗಳು ಭರ್ತಿಯಾಗುತ್ತಿದ್ದು, ಕೂರಲು ಆಸನವಿಲ್ಲದೇ ವೃದ್ಧರಾದಿಯಾಗಿ ಅಶಕ್ತರು ನಿಂತೇ ಪ್ರಯಾಣಿಸುವುದು ಸಾಮಾನ್ಯ ಎನಿಸಿದೆ. ಮೈಸೂರು ನಗರ ಸಾರಿಗೆಯಲ್ಲೂ ಅದೇ ಪರಿಸ್ಥಿತಿ ಇದ್ದು, ನಗರ ಸಾರಿಗೆ ಬಸ್‌ಗಳು ಬಹುತೇಕ ಮಹಿಳೆಯರಿಂದಲೇ ತುಂಬಿ ಹೋಗುತ್ತಿವೆ.

ಹೀಗೆ ಬಸ್ ಏರಿದ ಮಹಿಳೆಯರು ತಮಗೆ ಮೀಸಲಿಟ್ಟಿರುವ ಆಸನಗಳಲ್ಲಷ್ಟೇ ಕೂರದೆ, ಉಳಿದ ಆಸನಗಳಲ್ಲೂ ಕೂರುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹಿರಿಯ ನಾಗರಿಕರು ಮತ್ತು ಅಶಕ್ತರು ನಿಂತುಕೊಂಡೇ ಪ್ರಯಾಣಿಸುವ ಅನಿವಾರ್ಯತೆ ಎದುರಾಗಿದೆ.

ಸಾರ್ವಜನಿಕರೊಬ್ಬರು ನಿಗಮಕ್ಕೆ ಪತ್ರ ಬರೆದು, ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರೇ ಎಲ್ಲ ಆಸನಗಳಲ್ಲೂ ಕುಳಿತುಕೊಳ್ಳುತ್ತಿದ್ದು, ಪುರುಷರು ಮತ್ತು ಹಿರಿಯ ನಾಗರಿಕರಿಗೆ ಆಸನಗಳು ಇಲ್ಲದಂತಾಗಿದೆ ಎಂದು ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಪುರುಷರಿಗೆ ಮೀಸಲಿರುವ ಆಸನಗಳಲ್ಲಿ ಮಹಿಳೆಯರು ಕೂರದಂತೆ ಅಥವಾ ಕುಳಿತಿದ್ದರೆ ಪುರುಷರಿಗೆ ಬಿಟ್ಟುಕೊಡುವಂತೆ ಸೂಚನೆ ನೀಡಲಾಗಿದೆ ಎಂದು ಮೈಸೂರು ನಗರ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಟಿ.ವೀರೇಶ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net