ಬಸ್‌ಗಳ ಸಂಖ್ಯೆ ಹೆಚ್ಚಳ ಮಾಡಿ

12ard01 santhpur
ಔರಾದ್ ತಾಲೂಕಿನ ಸಂತಪುರ ಬಸವೇಶ್ವರ ವೃತ್ತದ ಹತ್ತಿರ ಬಸ್‌ನಲ್ಲಿ ಹತ್ತಲು  ಹರಸಾಹಸ ಪಡುತ್ತಿರುವ ಶಾಲಾ-ಕಾಲೇಜು ಮಕ್ಕಳು ಹಾಗೂ ವೃದ್ಧರು.
Published on

ಔರಾದ್: ಸಂತಪುರ ಗ್ರಾಮಕ್ಕೆ ಸರಿಯಾದ ಸಮಯಕ್ಕೆ ಬಸ್ ಇಲ್ಲದೆ ಸಾರ್ವಜನಿಕರು ಹಾಗೂಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಸಮರ್ಪಕ ಸಾರಿಗೆ ಬಸ್ ಸೌಕರ್ಯ ಇಲ್ಲದೆ ಪರದಾಡುವಂತಾಗಿದೆ. ಶಾಲೆಯಲ್ಲಿ ಇರಬೇಕಾದ ಮಕ್ಕಳು ಬಸ್‌ಗಾಗಿ ರಸ್ತೆಯಲ್ಲಿ ಕಾಯುವಂಥ ಪರಿಸ್ಥಿತಿ ಎದುರಾಗಿದೆ.

ಶಾಲೆ, ಕಾಲೇಜು, ಕಚೇರಿ ಸಮಯದಲ್ಲಿ ಬಸ್ ಫುಲ್ ಆಗುತ್ತಿವೆ. ಎಷ್ಟೋ ವಿದ್ಯಾರ್ಥಿಗಳಿಗೆ ಬಸ್ ಏರಲು ಆಗದ ಸ್ಥಿತಿ ನಿರ್ಮಾಣವಾಗಿದೆ. ವೃದ್ಧರು, ಮಹಿಳೆಯರು, ಮಕ್ಕಳಿಗೆ ತುಂಬಾ ತೊಂದರೆಯಾಗಿದೆ. ದೂರದ ಪ್ರಯಾಣ ದುಸ್ತರವಾಗಿದೆ. ವಿದ್ಯಾರ್ಥಿಗಳ ವಿಷಯದಲ್ಲಿ ಸಾರಿಗೆ ಇಲಾಖೆ ಅತ್ಯಂತ ಬೇಜವಾಬ್ದಾರಿ ತೋರುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದರು.

ಹಲವು ದಶಕಗಳಿಂದಲೂ ತಾಲೂಕಿನ ಗ್ರಾಮಗಳ ಜನತೆಗೆ ಸಮರ್ಪಕ ಮೂಲ ಸೌಲಭ್ಯಗಳು ಸಿಗುತ್ತಿಲ್ಲ. ಘಟಕಕ್ಕೆ ಹೊಸ ಬಸ್ ನೀಡದೆ ಹಳೆಯ ಬಸ್‌ಗಳನ್ನು ನೀಡಿದ್ದಾರೆ. ಇದೀಗ ಎಲ್ಲೆಂದರಲ್ಲಿ ಬಸ್‌ಗಳು ಕೆಟ್ಟು ನಿಲ್ಲುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅದರಲ್ಲೂ ಮಹಿಳೆಯರಿಗೆ ಬಸ್ ಪ್ರಯಾಣ ಉಚಿತವಾಗಿದ್ದರಿಂದ ಜಾತ್ರೆ, ಮದುವೆ, ಇನ್ನಿತರ ಕೆಲಸಗಳಿಗೆ ಪ್ರಯಾಣ ಮಾಡುತ್ತಿರುವುದರಿಂದ ಬಸ್ ತುಂಬಿ ತುಳುಕುತ್ತಿದೆ.

ತಾಲೂಕಿನ ಪ್ರಮುಖ ಹೋಬಳಿ ಕೇಂದ್ರವಾದ ಸಂತಪುರದಿಂದ ಜಿಲ್ಲಾ ಕೇಂದ್ರ ಬೀದರ್ ಹಾಗು ತಾಲೂಕು ಕೇಂದ್ರ ಔರಾದ್‌ಗೆ ಶಿಕ್ಷಣಕ್ಕೆಂದು ತೆರಳಲು ಕಪ್ಪಿಕೇರಿ, ಜೋಜನಾ, ಜೋನ್ನೇಕೆರಿ, ಕೋಳ್ಳುರ್, ಎಕಲಾರ್, ಬೋರಾಳ್, ನಾಗುರ(ಎಂ), ನಾಗೂರ(ಎನ್), ಜೋಜನಾ, ನಾಗೂರ(ಬಿ), ಬೆಳಕುಣಿ, ಹೆಡಗಾಪುರ, ಮಸ್ಕಲ್, ಬೋರ್ಗಿ(ಜೆ) ಗ್ರಾಮಗಳ ಸೇರಿದಂತೆ ಇನ್ನಿತರ ಗ್ರಾಮಗಳ ನೂರಾರು ಮಕ್ಕಳು ನಿತ್ಯ ಸಂತಪುರದಿಂದ ಹೋಗುವ ಅನಿವಾರ್ಯತೆ ಇದ್ದು, ಈ ಹೋಬಳಿ ಕೇಂದ್ರವನ್ನು ಅವಲಂಭಿಸಿದ್ದಾರೆ. ಹೀಗಾಗಿ ಬಸ್‌ಗಳ ಸಂಖ್ಯೆ ಹೆಚ್ಚಿಸಿ, ಸುಖಕರ ಪಯಣಕ್ಕೆ ಅನುಕೂಲ ಮಾಡಿಕೊಡಬೇಕು ಎಂಬುದು ಗ್ರಾಮಸ್ಥರ ಒಕ್ಕೊರಲ ಒತ್ತಾಯವಾಗಿದೆ.

ಔರಾದ್ ಘಟಕದಿಂದ ಬೆಳಗ್ಗೆಯಿಂದ ಅಂತಾರಾಜ್ಯಕ್ಕೆ ತೆರಳಲು ಬಸ್ ಸಂಚಾರ ಪ್ರಾರಂಭಿಸಿದರೂ ಅವುಗಳ ಸೌಲಭ್ಯ ಗ್ರಾಮೀಣ ಭಾಗದ ಮಕ್ಕಳಿಗೆ ಸಿಗದಂತಾಗಿದೆ. ಹೀಗಾಗಿ ಮಕ್ಕಳು ಶಾಲಾ-ಕಾಲೇಜಿಗೆ ಸರಿಯಾದ ಸಮಯಕ್ಕೆ ಹೋಗದೇ ಶಿಕ್ಷಣದಿಂದ ವಂಚಿತರಾಗುವ ಪ್ರಸಂಗ ಬಂದೋದಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಮಾರ್ಗದಲ್ಲಿ ಹೆಚ್ಚಿನ ಬಸ್ ಸೌಕರ್ಯ ಒದಗಿಸಬೇಕು. ತಡೆರಹಿತ ಬಸ್‌ಗಳಲ್ಲಿಯೂ ಸಹ ಮಕ್ಕಳಿಗೆ ಪ್ರಯಾಣಿಸಲು ಅನುವು ಮಾಡಿಕೊಡಬೇಕು.

| ಅಶೋಕ ಶೇಂಬೆಳ್ಳಿ ಎಬಿವಿಪಿ ಪ್ರಮುಖ ಔರಾದ್

ಶಾಲಾ-ಕಾಲೇಜಿಗೆ ತೆರಳಿದ ಮಕ್ಕಳು ಮತ್ತೆ ಮನೆಗೆ ವಾಪಸ್ ಬರುವವರೆಗೂ ಪಾಲಕರು ಚಿಂತೆಯಲ್ಲಿಯೇ ಕಾಲ ಕಳೆಯುವಂತಾಗಿದೆ. ಹೆಚ್ಚುವರಿ ಬಸ್ ಒಡಿಸಲು ಹಲವು ಬಾರಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಬೀದರ್-ಔರಾದ್ ಮಾರ್ಗದಲ್ಲಿ ಬೆಳಗ್ಗೆ ಹಾಗೂ ಸಂಜೆ ಹೆಚ್ಚುವರಿ ಬಸ್ ಓಡಿಸಲು ಕ್ರಮವಹಿಸಬೇಕು. ನಿರ್ಲಕ್ಷ್ಯ ಮಾಡಿದರೆ ರಸ್ತೆ ತಡೆ ಮಾಡಲಾಗುವುದು.

| ಧನರಾಜ ಮುಸ್ತಾಪುರೆ ದಲಿದ ಸಂಘರ್ಷ ಸಮಿತಿ (ಕೃಷ್ಣಪ್ಪ ಬಣ) ಜಿಲ್ಲಾ ಸಂಚಾಲಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net