

ಮೂಡಿಗೆರೆ: ಬಸ್ಕಲ್, ದೊಡ್ಡಗುಡ್ಡ, ಹಾಂದಿ ಮೂಲಕ ಕಡೂರು-ಮೂಡಿಗೆರೆ ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುವ ಜಿಲ್ಲಾ ರಸ್ತೆ 9 ಕಿ.ಮೀ. ಸಂಪೂರ್ಣ ಗುಂಡಿಯಾಗಿದೆ. ಆದ್ದರಿಂದ ರಸ್ತೆಯನ್ನು ಅಭಿವೃದ್ಧಿಪಡಿಸುವಂತೆ ಇಂದ್ರವಳ್ಳಿ ಗ್ರಾಮದ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ರಹಿಮಾನ್ ಮಂಗಳವಾರ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ನೀಡಿದರು.
ರಸ್ತೆಯನ್ನು 4 ಗ್ರಾಪಂ, 27 ಕಂದಾಯ ಗ್ರಾಮಗಳು ಅವಲಂಬಿಸಿವೆ. ಶೃಂಗೇರಿ, ಹೊರನಾಡು, ಬೇಲೂರು, ಹಳೇಬೀಡು ಭಾಗಕ್ಕೆ ಪ್ರವಾಸಿಗರು ಇದೇ ರಸ್ತೆಯಲ್ಲಿ ಸಾಗುತ್ತಾರೆ. 10 ವರ್ಷದಿಂದ ಈ ರಸ್ತೆಯ ಗುಂಡಿ ಮುಚ್ಚಿಲ್ಲ. ಹಲವಾರು ಬಾರಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಈ ರಸ್ತೆ ಗುಂಡಿ ಮುಚ್ಚಲು ಮುಂದಾಗಿಲ್ಲ. ಬಾರಿ ಪ್ರಮಾಣದಲ್ಲಿ ಗುಂಡಿಯಾಗಿರುವ ರಸ್ತೆಯಲ್ಲಿ ವಾಹನಗಳು ಸಂಚರಿಸದೆ ಸುತ್ತಿಬಳಸಿ ಬೇರೆ ಮಾರ್ಗದಲ್ಲಿ ಸಂಚರಿಸುತ್ತವೆ. ಗರ್ಭಿಣಿಯರು, ರೋಗಿಗಳು, ವಿದ್ಯಾರ್ಥಿಗಳು ತಿರುಗಾಡಲು ಕಷ್ಟವಾಗಿದೆ. ಬಾಡಿಗೆ ವಾಹನ ಚಾಲಕರು ಗುಂಡಿಯಾದ ಈ ರಸ್ತೆಯಲ್ಲಿ ಸಂಚರಿಸಲು ಹಿಂದೇಟು ಹಾಕುತ್ತಾರೆ. ಈ ಬಗ್ಗೆ ಶಾಸಕಿ ನಯನಾ ಮೋಟಮ್ಮ ಅವರಿಗೆ ಮನವಿ ಸಲ್ಲಿಸಿದಾಗ, ಅವರ ಶಿಫಾರಸಿನಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ 9 ಕೋಟಿ ರೂ. ಅನುದಾನ ಮಂಜೂರು ಮಾಡಲು ಅನುಮೋದನೆಗಾಗಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಕಳುಹಿಸಿದ್ದಾರೆ. ಅನುಮೋದನೆ ನೀಡುವುದು ಕೂಡ ನನೆಗುದಿಗೆ ಬಿದ್ದಿದೆ. ಮಳೆಗಾಲ ಆರಂಭವಾದರೆ ರಸ್ತೆ ಅಭಿವೃದ್ಧಿಗೆ ಅಡ್ಡಿಯಾಗುತ್ತದೆ. ಇನ್ನೂ ಒಂದು ವರ್ಷ ಗುಂಡಿಯಾದ ಈ ರಸ್ತೆಯಲ್ಲಿ ತಿರುಗಾಡಿ ಜನ ಹೈರಾಣಾಗಬೇಕಾಗುತ್ತದೆ. ಈಗಲೆ ಅನುದಾನ ಬಿಡುಗಡೆ ಮಾಡಿದರೆ ಮಳೆಗಾಲಕ್ಕಿಂತ ಮುಂಚಿತವಾಗಿ ರಸ್ತೆ ಅಭಿವೃದ್ಧಿಪಡಿಸಬಹುದು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಈ ಕುರಿತು ಅಬ್ದುಲ್ ರಹಿಮಾನ್ ಮಾತನಾಡಿ, ಬಸ್ಕಲ್ ರಸ್ತೆ ಅಭಿವೃದ್ಧಿ ಅನುದಾನಕ್ಕಾಗಿ ಅನುಮೋದನೆ ನೀಡುವಂತೆ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದಾಗ, ಅನುದಾನ ಬಿಡುಗಡೆ ಮಾಡಿ, ತುರ್ತಾಗಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿ ಆರಂಭಿಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.