ತುಮಕೂರು: ವಿಜಯಪುರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್, ದ್ವಿಚಕ್ರವಾಹನಕ್ಕೆ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟಿದ್ದಾನೆ. ನಾಗವಲ್ಲಿ ಸಮೀಪದ ರಂಗಾಪುರದ ಮಹಮದ್ ಸಾಧಿಕ್(27) ಮೃತ. ಮಂಗಳವಾರ ಮಧ್ಯಾಹ್ನ ತುಮಕೂರಿನಿಂದ ಬೆಂಗಳೂರು ಕಡೆಗೆ ಬೈಕ್ನಲ್ಲಿ ಹೋಗುತಿದ್ದ ತೆರಳುತ್ತಿದ್ದ ಸಾಧಿಕ್ಗೆ ನಗರದ ಹೊರವಲಯದ ಪಂಡಿತನಹಳ್ಳಿ ಗೇಟ್ ಬಳಿ ಬಸ್ಡಿಕ್ಕಿಯಾಗಿದ್ದು, ಈ ವೇಳೆ ಕೆಳಗೆ ಬಿದ್ದ ಆತನ ಮೇಲೆ ಬಸ್ ಹರಿದು ಗಂಭೀರವಾಗಿ ಗಾಯಗೊಂಡಿದ್ದ. ತಕ್ಷಣ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಲಿಸದೆ ಮೃತಪಟ್ಟಿದ್ದಾನೆ. ಪ್ರತಿದಿನ ದ್ವಿಚಕ್ರವಾಹನದಲ್ಲಿಯೇ ಬೆಂಗಳೂರಿಗೆ ಕೆಲಸಕ್ಕೆ ತೆರಳುತ್ತಿದ್ದ ಮಹಮದ್ ಸಾಧಿಕ್ ಮಂಗಳವಾರ ಕೂಡ ತುಮಕೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಎನ್ನಲಾಗಿದೆ. ಕ್ಯಾತಸಂದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬುಕ್ಕಾಪಟ್ಟಣ: ಶಿರಾ ತಾಲೂಕು ಬುಕ್ಕಾಪಟ್ಟಣ ಹೋಬಳಿಯ ಕಂಬದಹಳ್ಳಿ ಗೇಟ್ ಬಳಿ ತೆಲಂಗಾಣ ರಾಜ್ಯದ ಹೈದರಾಬಾದ್ ನಿಂದ ಕರ್ನಾಟಕದ ಪ್ರವಾಸಿ ತಾಣಗಳಿಗೆ ಬಂದಿದ್ದ ಟೆಂಪೋ ಟ್ರಾವೆಲರ್ ಮಂಗಳವಾರ ಬೆಳಗಿನ ಜಾವ ಅಪಘಾತವಾಗಿದ್ದು, 3 ಜನಕ್ಕೆ ಗಂಭೀರವಾಗಿ ಗಾಯಗಳಾಗಿದ್ದು, 10 ಜನಕ್ಕೆ ಸಣ್ಣಪುಟ್ಟ ಗಾಯಗಳಾಗಿವೆ. ಪ್ರವಾಸ ಮುಗಿಸಿ ವಾಪಸ್ ಬುಕ್ಕಪಟ್ಟಣ ಹುಳಿಯಾರು ಮಾರ್ಗವಾಗಿ ಹೈದರಾಬಾದ್ಗೆ ತೆರಳುತ್ತಿರುವಾಗ ಟನೆ ಸಂಭವಿಸಿದೆ. ಸ್ಥಳಕ್ಕೆ ಬುಕ್ಕಾಪಟ್ಟಣ ಪೊಲೀಸ್ ಠಾಣೆಯ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ಟಿಟಿ ವಾಹನ ನೋಡಿಕೊಂಡು ಬೈಕ್ ಚಾಲನೆ ಮಾಡಿಕೊಂಡು ಬರುತ್ತಿದ್ದ ವ್ಯಕ್ತಿಗೂ ಹಿಂಬದಿಯಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರ ಕಾಲು ಮುರಿದಿದೆ. ಎಲ್ಲ ಗಾಯಾಳುಗಳನ್ನು ಶಿರಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.