

ಹುಬ್ಬಳ್ಳಿ: ನಗರದ ನೆಹರು ಮೈದಾನದಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಮೂವರ ಮೇಲೆ ಬಸ್ ಹರಿದು, ಭಿಕ್ಷುಕ ಸೇರಿ ಇಬ್ಬರು ಮೃತಪಟ್ಟ ಘಟನೆ ಇಲ್ಲಿನ ಜೆಸಿ ನಗರದ ಜೋಶಿ ಪೆಟ್ರೋಲ್ ಬಂಕ್ ಎದುರು ಸೋಮವಾರ ನಡೆದಿದೆ.
ಅಣ್ಣಿಗೇರಿಯ ಕಾಂಗ್ರೆಸ್ ಕಾರ್ಯಕರ್ತ ನಿಂಗಪ್ಪ ಮನ್ನಾಪೂರ(62) ಸ್ಥಳದಲ್ಲಿಯೇ ಮೃತಪಟ್ಟರೆ, 65 ವರ್ಷ ವಯಸ್ಸಿನ ಭಿಕ್ಷುಕ ಕಿಮ್ಸ್ನಲ್ಲಿ ಮೃತಪಟ್ಟಿದ್ದಾರೆ. ಗಾಯಗೊಂಡಿರುವ ಕುಂದಗೋಳ ತಾಲೂಕಿನ ಕಳಸ ಗ್ರಾಮದ ಯಲ್ಲಪ್ಪಗೌಡ ಕರಿಗೌಡರ (45) ಅವರನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ.
ಸಮಾವೇಶದ ಸ್ಥಳಕ್ಕೆ ತೆರಳುತ್ತಿದ್ದಾಗ ಗದಗಿನಿಂದ ಬಂದ ಬೆಟಗೇರಿ ಡಿಪೋದ ಗದಗ-ಹುಬ್ಬಳ್ಳಿ ಬಸ್ ಪಾದಚಾರಿಗಳ ಮೇಲೆ ಹರಿದಿದೆ. ಈ ವೇಳೆ ಕೆಲ ಹೊತ್ತು ವಾಹನ ಸಂಚಾರ ಸ್ಥಗಿತಗೊಂಡು ಗೊಂದಲದ ವಾತಾವರಣ ನಿರ್ವಣವಾಗಿತ್ತು. ಸಂಚಾರ ಠಾಣೆ ಪೊಲೀಸರು ಗಾಯಾಳುಗಳನ್ನು ಆಟೊದಲ್ಲಿ ಆಸ್ಪತ್ರೆಗೆ ಸಾಗಿಸಿದರು.
ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಗೋಪಾಲ ಬ್ಯಾಕೋಡ, ಪೂರ್ವ ಸಂಚಾರ ಠಾಣೆ ಇನ್ಸ್ಪೆಕ್ಟರ್ ಎನ್.ಸಿ. ಕಾಡದೇವರ ಸೇರಿದಂತೆ ಬಹಳಷ್ಟು ಪೊಲೀಸರು ಸ್ಥಳದಲ್ಲಿದ್ದು, ಸಂಚಾರ ಸುಗಮಗೊಳಿಸಿದರು.
‘ಸಮಾವೇಶಕ್ಕೆಂದು ಅಣ್ಣಿಗೇರಿಯಿಂದ ನಾವು ಜತೆಯಾಗಿ ಬಂದಿದ್ದೆವು. ಬಸ್ ರಿವರ್ಸ್ ಬಂದು ಸಮಾವೇಶಕ್ಕೆ ತೆರಳುತ್ತಿದ್ದವರ ಮೇಲೆ ಹರಿದಿದೆ’ ಎಂದು ಅಣ್ಣಿಗೇರಿಯ ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು. ಸುದ್ದಿ ತಿಳಿಯುತ್ತಿದ್ದಂತೆ ಸಮಾವೇಶದ ವೇದಿಕೆಯಲ್ಲಿದ್ದ ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ, ಕಿಮ್ಸ್ಗೆ ಭೇಟಿ ನೀಡಿ, ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಪೂರ್ವ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.