ಬಸ್ - ಸಿಲಿಂಡರ್ ಲಾರಿ ಡಿಕ್ಕಿ, 15 ಮನದಿಗೆ ಗಾಯ

FotoJet (1)
Published on

ಗಾಯಾಳುಗಳಲ್ಲಿ ಆಸ್ಪತ್ರೆಗೆ ಸಾಗಿಸಲು ನೆರವಾದ ಸಚಿವ ಡಾ.ಎಂ.ಸಿ. ಸುಧಾಕರ್ | ಅಪಘಾತದಲ್ಲಿ ಹಲವರಿಗೆ ಗಾಯ

 ಚಿಂತಾಮಣಿ : ಬೆಂಗಳೂರಿನ ದೇವನಗೊಂದಿಯಿಂದ ಚಿಂತಾಮಣಿ ತಾಲೂಕಿನ ಕೈವಾರಕ್ಕೆ ಗ್ಯಾಸ್ ಸಿಲಿಂಡರ್ ಸಾಗಿಸುತ್ತಿದ್ದ ಲಾರಿ ಹಾಗೂ ಆಂಧ್ರಪ್ರದೇಶದ ಸಾರಿಗೆ ಸಂಸ್ಥೆಯ ಬಸ್ ನಡುವೆ ಸಂತೇಹಲ್ಲಹಳ್ಳಿ ಗೇಟ್ ಬಳಿ ಅಪಘಾತ ಸಂಭವಿಸಿ ಬಸ್‌ನಲ್ಲಿದ್ದ 15ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಗಾಯಗೊಂಡು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಆಂಧ್ರಪ್ರದೇಶದ ಎಪಿಎಸ್‌ಆರ್‌ಟಿಸಿ ಬಸ್, ಲಾರಿಗೆ ಡಿಕ್ಕಿ ಹೊಡೆದ ನಂತರ ರಸ್ತೆಯ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದು ನಿಂತಿದ್ದು, ಬಸ್‌ನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಲಾರಿಯ ಒಂದು ಭಾಗಕ್ಕೆ ಹಾನಿಯಾಗಿದೆ. ಸಿಲಿಂಡರ್‌ಗಳು ರಸ್ತೆಯಲ್ಲಿ ಚೆಲ್ಲಾಪಿಲಿಯಾಗಿ ಬಿದಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಬಸ್‌ನಲ್ಲಿದ್ದ ಕಡಪಾದ ನಿತ್ಯಪೂಜಿತಾ (19), ಅನುಂಪಲ್ಲಿ ಗ್ರಾಮದ ಅರುಣಮ್ಮ (40)ಮತ್ತು ಕೊತ್ತಮಾಜಿವರಂ ಗ್ರಾಮದ ವೆಂಕಟೇಶ್ (60)ಅವರನ್ನು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕಡಪಾದ ದರ್ಬಾನ್ ರೆಡ್ಡಿ (63), ಅಶೋಕ್ (31)ಮತ್ತು ರಾಜಣ್ಣ ಭೋವಿ (60)ಅವರನ್ನು ಬೆಂಗಳೂರಿನ ಸಿಲಿಕಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯ ಎಂವಿಜೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆದ ಗಾಯಾಳು ಚೇತರಿಸಿಕೊಂಡ ಬಳಿಕ ಆಸ್ಪತ್ರೆಯಿಂದ ತೆರಳಿದ್ದಾರೆ ಎನ್ನಲಾಗಿದೆ.

ಕಡಪಾ ಜಿಲ್ಲೆ ಮದನಪಲ್ಲಿಯ ನಿವಾಸಿ, ಬಸ್ ಚಾಲಕ ಇ.ಕಮಲ್ ನಾಯಕ್ (45)ತೀವ್ರವಾಗಿ ಗಾಯಗೊಂಡಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಚಿವರಿಂದ ಪೊಲೀಸರಿಗೆ ಮಾಹಿತಿ: ಚಿಂತಾಮಣಿಗೆ ಬರುತ್ತಿದ್ದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಅವರು ಅಪಘಾತ ಕಂಡು ಕೂಡಲೇ ಚಿಂತಾಮಣಿ ಪೊಲೀಸರಿಗೆ ಮಾಹಿತಿ ನೀಡಿ. ಆಂಬುಲೆನ್ಸ್‌ಗಾಗಿ ಹೊಸಕೋಟೆಯ ಎಂವಿಜೆ ಆಸ್ಪತ್ರೆ ಮತ್ತು ಚಿಂತಾಮಣಿಯ ಸಾರ್ವಜನಿಕರ ಆಸ್ಪತ್ರೆಯ ವೈದ್ಯರಿಗೆ ಕರೆ ಮಾಡಿ ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ರವಾನಿಸಲು ಸಹಕರಿಸಿದರು.

ಚಿಂತಾಮಣಿ ಉಪವಿಭಾಗದ ಡಿವೈಎಸ್‌ಪಿ ಮುರಳೀಧರ್, ಗ್ರಾಮಾಂತರ ಪೊಲೀಸ್ ಠಾಣೆಯ ಪೊಲಿಸ್ ಇನ್‌ಸ್ಪೆಕ್ಟರ್ ಶಿವರಾಜ್, ನಗರಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ವೀಜಿ ಕುಮಾರ್, ಪಿಎಸ್‌ಐಗಳಾದ ಮಮತಾ, ನಾಗೇಂದ್ರ, ಕೈವಾರ ಹೊರಠಾಣೆಯ ಎಎಸ್‌ಐ ಪ್ರಕಾಶ್ ಮತ್ತು ಅಗ್ನಿ ಶಾಮಕ ದಳದ ಅಧಿಕಾರಿ ಲೋಕೇಶ್ ತಂಡ ಸ್ಥಳಕ್ಕೆ ತೆರಳಿ ಗಾಯಳುಗಳನ್ನು ಆಸ್ಪತ್ರೆಗೆ ರವಾನಿಸಿದರು, ಅಪಘಾತಕ್ಖೀಡಾದ ವಾಹನಗಳನ್ನು ಕ್ರೇನ್ ಮೂಲಕ ರಸ್ತೆಯಿಂದ ಪಕ್ಕಕ್ಕೆ ಸರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net