ಬಸ್ ಸಂಚಾರ ತಡೆದು ಪ್ರತಿಭಟನೆ

14-GPT-2
Published on

ಗುಂಡ್ಲುಪೇಟೆ: ಪ್ರಮುಖ ಹೋಬಳಿ ಕೇಂದ್ರವಾಗಿದ್ದರೂ ಹೆಚ್ಚುವರಿ ಬಸ್ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ತಾಲೂಕಿನ ಹಂಗಳ ಗ್ರಾಮಸ್ಥರು ಬುಧವಾರ ಸಾರಿಗೆ ಬಸ್‌ಗಳನ್ನು ತಡೆದು ಪ್ರತಿಭಟನೆ ನಡೆಸಿದರು.


ಪಟ್ಟಣದಿಂದ ಬಂಡೀಪುರ ಕಾಡಂಚಿನ ಎಲ್ಲ ಗ್ರಾಮಗಳಿಗೂ ತೆರಳುವ ಬಸ್ಸುಗಳು ಗ್ರಾಮ ಮಾರ್ಗದಲ್ಲೇ ಸಂಚರಿಸುತ್ತವೆ. ಆದರೂ ಅವುಗಳಲ್ಲಿ ಹೆಚ್ಚಿನ ಜನರು ಪ್ರಯಾಣಿಸುವುದರಿಂದ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಸಕಾಲಕ್ಕೆ ಹೋಗಲಾಗುತ್ತಿಲ್ಲ. ಅಲ್ಲದೆ, ಸರ್ಕಾರವು ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ತಂದಿದ್ದರೂ ಗ್ರಾಮದ ಜನತೆಗೆ ಉಪಯೋಗವಾಗುತ್ತಿಲ್ಲ. ಆದ್ದರಿಂದ ಬೆಳಗ್ಗೆ ಮತ್ತು ಸಂಜೆ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಅನುಕೂಲಕ್ಕೆ ಬಸ್‌ಗಳ ಸಂಚಾರ ಹೆಚ್ಚಿಸಬೇಕು ಎಂದು ಗ್ರಾಮಸ್ಥರು ಸಾರಿಗೆ ಬಸ್‌ಗಳ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.


ನಂತರ ಸ್ಥಳದಲ್ಲಿದ್ದ ಮುಖಂಡರು ಸಾರಿಗೆ ಅಧಿಕಾರಿಗಳಿಗೆ ಕರೆ ಮಾಡಿ ಸಮಸ್ಯೆ ಬಗೆಹರಿಸುವಂತೆ ಮನವರಿಕೆ ಮಾಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net