

ಚಿತ್ರದುರ್ಗ: ರಾಜ್ಯ ಸರ್ಕಾರ ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರ ಶೇ. 15ರಷ್ಟು ಏರಿಕೆ ಮಾಡಿರುವುದನ್ನು ಖಂಡಿಸಿ ಜೆಡಿಎಸ್ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.
ಬಸ್ ಪ್ರಯಾಣ ದರ ಹೆಚ್ಚಳದ ತೀರ್ಮಾನ ಕೂಡಲೇ ಹಿಂಪಡೆಯಲು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಬೇಕೆಂದು ಒತ್ತಾಯಿಸಿ ರಾಜ್ಯಪಾಲರಿಗೆ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ಎಂ.ಜಯಣ್ಣ ಮಾತನಾಡಿ, ರಾಜ್ಯ ಸರ್ಕಾರ ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಜನಸಾಮಾನ್ಯರ ಮೇಲೆ ದರ ಹೆಚ್ಚಳದ ಹೊರೆ ಹೊರಿಸಿದೆ ಎಂದು ದೂರಿದರು.
ಸುಭದ್ರವಾಗಿದ್ದ ಕರ್ನಾಟಕದ ಆರ್ಥಿಕತೆಯನ್ನು ಹದಗೆಡೆಸಿರುವ ಈ ಸರ್ಕಾರ, ಮಹಿಳೆಯರಿಗೆ ಉಚಿತ ಪ್ರಯಾಣ ನೀಡಿ, ಅದರ ನಷ್ಟವನ್ನು ಸರಿದೂಗಿಸಲು ಅನಗತ್ಯವಾಗಿ ಹೆಚ್ಚಿಸುವ ಮೂಲಕ ಪುರುಷ ಪ್ರಯಾಣಿಕರ ಮೇಲೆ ಸವಾರಿ ಮಾಡಲು ಹೊರಟಂತಿದೆ ಎಂದು ವಾಗ್ದಾಳಿ ನಡೆಸಿದರು.
ಗ್ಯಾರಂಟಿ ಯೋಜನೆಯಿಂದಾಗಿ ಸಾರಿಗೆ ಸಂಸ್ಥೆಯೂ ದಿವಾಳಿಯಾಗಿದ್ದು, ಈಗಾಗಲೇ ಸಂಸ್ಥೆಗೆ 2 ಸಾವಿರ ಕೋಟಿ
ರೂ. ಸಾಲ ಪಡೆಯಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಸರ್ಕಾರ ಒಂದು ಕೈಯಲ್ಲಿ ಕೊಟ್ಟು, ಮತ್ತೊಂದು ಕೈಯಲ್ಲಿ ಕಸಿದು ಕೊಳ್ಳುತ್ತಿದೆ. ಜನವಿರೋಧಿ ನಡೆ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಸರ್ಕಾರ ಅವೈಜ್ಞಾನಿಕ ಬಸ್ ಪ್ರಯಾಣ ದರ ಏರಿಕೆ ತೀರ್ಮಾನ ಹಿಂಪಡೆಯದಿದ್ದರೆ, ರಾಜ್ಯಾದ್ಯಂತ ಪಕ್ಷದ ಮುಖಂಡರು, ಕಾರ್ಯಕರ್ತರು ವಿವಿಧ ರೀತಿಯಲ್ಲಿ ಹೋರಾಡಲು ಸಿದ್ಧ ಎಂದು ಎಚ್ಚರಿಸಿದರು.
ನಗರಸಭೆ ಸದಸ್ಯ ನಸರುಲ್ಲಾ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಾಲಸ್ವಾಮಿ ನಾಯಕ, ಪದಾಧಿಕಾರಿಗಳಾದ ಸಣ್ಣ ತಿಮ್ಮಣ್ಣ, ಗಣೇಶ್‌ಮೂರ್ತಿ, ಹನುಮಂತರಾಯಪ್ಪ, ಕರಿಬಸಪ್ಪ, ವೀರಭದ್ರಪ್ಪ, ಲಿಂಗರಾಜು, ಮಠದಹಟ್ಟಿ ವೀರಣ್ಣ, ಗೀತಮ್ಮ, ಅಬು ಇತರರಿದ್ದರು.