

ಹನೂರು: ಪಟ್ಟಣ ಪಂಚಾಯಿತಿ ವತಿಯಿಂದ ಖಾಸಗಿ ಬಸ್ ನಿಲ್ದಾಣದ ಬಳಿ ನಿರ್ಮಿಸಿರುವ ಸಾರ್ವಜನಿಕ ಶೌಚಗೃಹ ಕಳೆದ 2 ದಿನಗಳಿಂದ ಬಾಗಿಲು ಮುಚ್ಚಿದೆ. ಇದರಿಂದ ಸಾರ್ವಜನಿಕರು ತುಂಬಾ ತೊಂದರೆ ಅನುಭವಿಸುವಂತಾಗಿದೆ.
ಹನೂರು ತಾಲೂಕು ಕೇಂದ್ರ. ಇಲ್ಲಿಗೆ ಕೆಲಸ ಕಾರ್ಯಗಳ ನಿಮಿತ್ತ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳ ಜನರು ನಿತ್ಯ ಆಗಮಿಸುತ್ತಾರೆ. ಹನೂರಿನಲ್ಲಿ ತಹಸೀಲ್ದಾರ್ ಕಚೇರಿ, ತಾಲೂಕು ಪಂಚಾಯಿತಿ, ಪೊಲೀಸ್ ಠಾಣೆ, ಪಶು ವೈದ್ಯಕೀಯ ಆಸ್ಪತ್ರೆ, ನ್ಯಾಯಾಲಯ, ರೈತ ಸಂಪರ್ಕ ಕೇಂದ್ರ, ಎಪಿಎಂಸಿ, ಸೆಸ್ಕ್ ಸೇರಿದಂತೆ ಇನ್ನು ಕೆಲವು ಇಲಾಖೆಗಳಿವೆ. ಆದರೆ ಇವುಗಳಲ್ಲಿ ಎಲ್ಲಿಯೂ ಸಾರ್ವಜನಿಕ ಶೌಚಗೃಹವಿಲ್ಲ. ತಹಸೀಲ್ದಾರ್ ಕಚೇರಿಯಲ್ಲಿ ಶೌಚಗೃಹವಿದ್ದರೂ ಬಳಕೆಗೆ ಬಾರದಂತಾಗಿದೆ.
ಪರಿಣಾಮ ಈ ಕಚೇರಿಗಳಿಗೆ ಆಗಮಿಸುವ ಜನರು ಶೌಚಕ್ಕಾಗಿ ಪಟ್ಟಣದ ಸರ್ಕಾರಿ ಹಾಗೂ ಬಸ್ ನಿಲ್ದಾಣದಲ್ಲಿ ನಿರ್ಮಿಸಿರುವ ಶೌಚಗೃಹದ ಮೊರೆ ಹೋಗಬೇಕಿದೆ. ಇಲ್ಲವೇ ಬಯಲನ್ನು ಆಶ್ರಯಿಸಬೇಕಾದ ಅನಿವಾರ್ಯತೆ ಇದೆ. ಹೀಗಿರುವಾಗ ಕಳೆದ 2 ದಿನಗಳಿಂದ ಖಾಸಗಿ ಬಸ್ ನಿಲ್ದಾಣದ ಬಳಿಯ ಸಾರ್ವಜನಿಕರ ಶೌಚಗೃಹಕ್ಕೆ ನೀರು ಪೂರೈಸುವ ಮೋಟಾರ್ ದುರಸ್ತಿಗೊಂಡಿರುವ ಪರಿಣಾಮ ಬಾಗಿಲು ಮುಚ್ಚಿದೆ. ಇದರಿಂದ ಮಹಿಳೆಯರು, ವಯೋವೃದ್ಧರು ಹೆಚ್ಚಿನ ತೊಂದರೆ ಅನುಭವಿಸುವಂತಾಗಿದೆ. ಕೆಲವರು ಶೌಚಕ್ಕಾಗಿ ಸರ್ಕಾರಿ ಬಸ್ ನಿಲ್ದಾಣದ ಅಲೆಯುವಂತಹ ಸ್ಥಿತಿ ನಿರ್ಮಾಣವಾಗಿದೆ.
ದುರ್ವಾಸನೆ ಬೀರುತ್ತಿದೆ: ಶೌಚಗೃಹಕ್ಕೆ ಹೊಂದಿಕೊಂಡಂತೆ ಪಪಂ ವತಿಯಿಂದ ನಿರ್ಮಿಸಿರುವ ಮಳಿಗೆಗಳಿವೆ. ಆದರೆ ಶೌಚಾಲಯಕ್ಕೆ ನೀರು ಪೂರೈಕೆ ಸ್ಥಗಿತಗೊಂಡಿರುವುದರಿಂದ ವಿಪರೀತ ದುರ್ವಾಸನೆ ಬೀರುತ್ತಿದೆ. ಇತ್ತ ಶೌಚಾಲಯ ಬಾಗಿಲು ಮುಚ್ಚಿರುವುದರಿಂದ ವಿಧಿಯಿಲ್ಲದೇ ಕೆಲವರು ಆಸುಪಾಸು ಶೌಚ ಮಾಡುತ್ತಿದ್ದಾರೆ.
ಇದರಿಂದ ಬಸ್ ನಿಲ್ದಾಣದ ಸುತ್ತಮುತ್ತ ಅನೈರ್ಮಲ್ಯ ನಿರ್ಮಾಣವಾಗಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಸಂಚರಿಸುವ ಸ್ಥಿತಿ ನಿರ್ಮಾಣವಾಗಿದ್ದರೆ ಅಂಗಡಿಯವರು ದುರ್ವಾಸನೆ ಸಹಿಸಿಕೊಂಡು ವ್ಯಾಪಾರ ನಡೆಸಬೇಕಿದೆ. ಆದ್ದರಿಂದ ಪ.ಪಂ. ಅಧಿಕಾರಿಗಳು ಈ ಬಗ್ಗೆ ಶೀಘ್ರ ಅಗತ್ಯ ಕ್ರಮವಹಿಸಿ ಮೋಟಾರ್ ರಿಪೇರಿ ಮಾಡಿಸಿ ಶೌಚಾಲಯವು ಬಳಕೆಗೆ ಬರುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.