

ಚಾಮರಾಜನಗರ: ರಾಜ್ಯದಲ್ಲಿ ಕೆಎಸ್‌ಆರ್‌ಟಿಸಿ ಬಸ್ ದರವನ್ನು ಶೇ. 15 ರಷ್ಟು ಹೆಚ್ಚಿಸಿರುವುದನ್ನು ಖಂಡಿಸಿ ಜಿಲ್ಲಾ ಬಿಜೆಪಿ ವತಿಯಿಂದ ಪ್ರಯಾಣಿಕರಿಗೆ ಗುಲಾಬಿ ಹೂ ನೀಡುವ ಮೂಲಕ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಕೆಲಕಾಲ ಪ್ರತಿಭಟನೆ ನಡೆಸಿದರು. ರಾಜ್ಯ ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ, ಸಾರಿಗೆ ಸಚಿವರ ವಿರುದ್ಧ ೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಮಾತನಾಡಿ, ರಾಜ್ಯ ಸರ್ಕಾರ ಬಡವರು, ಮಧ್ಯವರ್ಗದ ಜನರ ಪಾಲಿಗೆ ಸತ್ತು ಹೋಗಿದೆ. ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷಗಳ ಹತ್ತಿರವಾಗುತ್ತಿದೆ. ಆದರೇ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿಲ್ಲ. ಬಡವರ ಮತಗಳನ್ನು ಪಡೆದುಕೊಳ್ಳಲು 5 ಗ್ಯಾರಂಟಿ ಯಜನೆಗಳನ್ನು. ಜಾರಿಗೊಳಿಸಿತು. ಆದರೇ ಯೋಜನೆಗೆ ಹಣ ಹೊಂದಿಸಲು ಆಗದೇ, ಎಸ್‌ಸಿ,ಎಸ್‌ಟಿಗಳ ಅಭಿವೃದ್ಧಿಗೆ ಮೀಸಲಿಟ್ಟಿರುವ ಹಣವನ್ನು ಬಳಸಿಕೊಂಡು ಗ್ಯಾರಂಟಿ ಯೋಜನೆಗಳನ್ನು ನಡೆಸುತ್ತಿದೆ ಎಂದು ದೂರಿದರು.
ಗ್ಯಾರೆಂಟಿ ಯೋಜನೆಗಳಿಗೆ ಹಣ ಹೊಂದಾಣಿಕೆ ಮಾಡಿಕೊಳ್ಳಲು ಆಗದೇ, ಸಾರ್ವಜನಕರಿಂದ ಲೂಟಿ ಮಾಡಲು ಶುರು ಮಾಡಿದ್ದಾರೆ. ಸಾರಿಗೆ ಸಚಿವ ರಾಮಲಿಂಗರೆಡ್ಡಿ ಶಕ್ತಿ ಯೋಜನೆಯಿಂದ ಸಾರಿಗೆ ಇಲಾಖೆ ಶಕ್ತಿ ಹೆಚ್ಚಿದೆ ಎಂದು ಬೊಗಳೆ ಬಿಡುತಿದ್ದರು. ಆದರೇ ಇದು ಬಸ್ ದರ ಹೆಚ್ಚಳದಿಂದ ಸುಳ್ಳಾಗಿದೆ. ಮಹಿಳೆಯರಿಗೆ ಉಚಿತ ನೀಡಿ, ಪುರುಷರ ಜೇಬಿನಿಂದ ಹೆಚ್ಚುವರಿ ದರ ಪಡೆಯುತ್ತಿದ್ದಾರೆ. ಇಂತಹ ದುರಾಡಳಿತದ ವಿರುದ್ಧ ಜನರು ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್, ಜಿಲ್ಲಾ ವಕ್ತಾರ ಕಾಡಹಳ್ಳಿ ಕುಮಾರ್, ಸಹ ವಕ್ತಾರ ರಾಮಸಮುದ್ರ ಶಿವಣ್ಣ, ಜಿಲ್ಲಾ ಕಾರ್ಯದರ್ಶಿ ನಟರಾಜು, ಮಾಜಿ ಅಧ್ಯಕ್ಷ ಆರ್.ಸುಂದರ್, ನಗರ ಮಂಡಲ ಅಧ್ಯಕ್ಷ ಶಿವರಾಜ್, ಪ್ರಧಾನ ಕಾರ್ಯದರ್ಶಿ ಕೂಸಣ್ಣ, ಮಹೇಶ್, ಚುಡಾ ಮಾಜಿ ಅಧ್ಯಕ್ಷ ಬಾಲಸುಬ್ರಮ್ಮಣ್ಯಂ, ಯುವ ಮೋರ್ಚಾ ಅಧ್ಯಕ್ಷ ಸೂರ್ಯ, ಪ್ರಧಾನ ಕಾರ್ಯದರ್ಶಿ ಆನಂದ್ ಭಗೀರಥ, ಎಸ್‌ಸಿ ಮೋರ್ಚಾ ಅಧ್ಯಕ್ಷ ಮೂಡಹಳ್ಳಿ ಮೂರ್ತಿ, ಎಸ್‌ಟಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಚಂದ್ರು ಬುಲೆಟ್, ಎಸ್‌ಸಿ ಮೋರ್ಚಾ ನಗರ ಅಧ್ಯಕ್ಷ ಪಠಶಿವಯ್ಯ, ನಗರಸಭಾ ಸದಸ್ಯ ಮನೋಜ್‌ಪಟೇಲ್ ಹಾಗೂ ಇತರರು ಭಾಗವಹಿಸಿದ್ದರು.