

ಕೊಡೇಕಲ್: ಶಕ್ತಿ ಯೋಜನೆಯಿಂದಾಗಿ ಶಾಲಾ ಮಕ್ಕಳಿಗೆ ಬಸ್‌ನಲ್ಲಿ ಸಂಚರಿಸಲು ತೀವ್ರ ಸಮಸ್ಯೆಯಾಗಿದ್ದು, ತಪ್ಪಿಸಲು ಹೆಚ್ಚುವರಿ ಬಸ್ ಸಂಚಾರ ಆರಂಭಿಸುವAತೆ ಒತ್ತಾಯಿಸಿ ಅಮ್ಮಾಪುರ(ಎಸ್‌ಕೆ) ಗ್ರಾಮದಲ್ಲಿ ವಿದ್ಯಾರ್ಥಿಗಳು ಸೋಮವಾರ ಬಸ್ ತಡೆದು ಪ್ರತಿಭಟನೆ ನಡೆಸಿದರು.
ಹುಣಸಗಿಯಿಂದ ಬೆಳಗ್ಗೆ ನಾರಾಯಣಪುರಕ್ಕೆ ತೆರಳುವ ಬಸ್ ಅಮ್ಮಾಪುರ (ಎಸ್‌ಕೆ)ಕ್ಕೆ ಆಗಮಿಸುತ್ತಿದ್ದಂತೆ ರಸ್ತೆಗೆ ಮುಳ್ಳು ಕಂಟಿ, ಕಲ್ಲುಗಳನ್ನು ಇಟ್ಟ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು, ಈ ಮಾರ್ಗವಾಗಿ ಕೇವಲ ಎರಡು ಬಸ್ ಸಂಚರಿಸುತ್ತವೆ. ೧೫ ದಿನಗಳಿಂದ ಬಸ್ ಫುಲ್ ಆಗಿ ಬರುತ್ತಿರುವುದರಿಂದ ವಿದ್ಯಾರ್ಥಿಗಳು ಶಾಲೆಗೆ ಹೋಗದಂಥ ಸ್ಥಿತಿ ನಿರ್ಮಾಣವಾಗಿದೆ. ಈ ಮಾರ್ಗದಲ್ಲಿ ಹೆಚ್ಚುವರಿ ಬಸ್ ಓಡಿಸುವಂತೆ ಸಾರಿಗೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾರಿಗೆ ಅಧಿಕಾರಿಗಳು ಬಂದು ಸಮಸ್ಯೆ ಪರಿಹರಿಸುವವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದಾಗ ಎಎಸ್‌ಐ ಬಾಬು ರಾಠೋಡ್, ಸಿಬ್ಬಂದಿ ಸಂಗಣ್ಣ ಮತ್ತು ಬಸ್ ನಿಲ್ದಾಣದ ಸಾರಿಗೆ ನಿಯಂತ್ರಕ ಅಶೋಕ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿ ಮೇಲಧಿಕಾರಿಗಳ ಗಮನಕ್ಕೆ ತಂದು ಬೇಡಿಕೆಗೆ ಸ್ಪಂದಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.