

ಬೀದರ್: ಇಲ್ಲಿನ ಈಶಾನ್ಯ ಸಾರಿಗೆ ಸಂಸ್ಥೆಯ ಬೀದರ್ ಬಸ್ ಡಿಪೋ-1ರಲೇ ಚಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಓಂಕಾರ (40) ಆತ್ಮಹತ್ಯೆಗೆ ಶರಣಾದ ಚಾಲಕ. ಈತ ಭಾಲ್ಕಿ ತಾಲೂಕಿನ ಡೊಂಗರಗಿ ಗ್ರಾಮದ ನಿವಾಸಿ. 12 ವರ್ಷದಿಂದ ಸಂಸ್ಥೆಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು.
ಶನಿವಾರ ಸಂಜೆ ಗ್ರಾಮ ಪಂಚಾಯಿತಿ ಚುನಾವಣೆ ಕೆಲಸದ ನಿಮಿತ್ತವಾಗಿ ಔರಾದ್ ತಾಲೂಕಿನ ಸಾಂಗವಿಗೆ ಬಸ್ ತೆಗೆದುಕೊಂಡು ಹೋಗಿದ್ದರು. ಎಲ್ಲ ಚುನಾವಣೆ ಸಿಬ್ಬಂದಿ ಹಾಗೂ ಮತಯಂತ್ರಗಳನ್ನು ಕೆಳಗೆ ಇಳಿಸಿ, ಊಟ ಮಾಡಿಕೊಂಡು ಬರುವುದಾಗಿ ಹೇಳಿ ಬಸ್ ತೆಗೆದುಕೊಂಡು ಬಂದಿದ್ದಾನೆ. ಅಲ್ಲಿಂದ ಭಾಲ್ಕಿ ತಾಲೂಕಿನ ಕೋಸಂ ಬಳಿ ಬಸ್ ಬಿಟ್ಟು ರಾತ್ರಿ ಬೀದರ್ಗೆ ಆಗಮಿಸಿ ಡಿಪೋ ಒಂದರಲ್ಲಿ ಘಟಕ ವ್ಯವಸ್ಥಾಪಕರ ಕಚೇರಿ ಪಕ್ಕದ ರೆಸ್ ರೂಮ್ (ವಿಶ್ರಾಂತಿ ಕೋಣೆ)ನಲ್ಲಿ ನೇಣು ಹಾಕಿಕೊಂಡಿದ್ದಾರೆ.
ಬೀದರ್-ಲಾತೂರ್ ಬಸ್ ಮೇಲೆ ಇವರು ನಿತ್ಯ ಕೆಲಸ ಮಾಡುತ್ತಿದ್ದರು. ಚುನಾವಣೆ ಕೆಲಸಕ್ಕೆ ಇವರಿಗೆ ನಿಯೋಜಿಸಲಾಗಿತ್ತು. ಬಸ್ ಬಿಟ್ಟು ಡಿಪೋಗೆ ಮರಳಿದ ಇವರಿಗೆ ಭದ್ರತಾ ಸಿಬ್ಬಂದಿ ಒಳಗೆ ಹೇಗರ ಬಿಟ್ಟರು ಎಂಬುದು ಅನುಮಾನಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ಬಸ್ ಇಲ್ಲದೇ ಚಾಲಕರಿಗೆ ಡಿಪೋದಲ್ಲಿ ಪ್ರವೇಶ ಇರುವುದಿಲ್ಲ.
ಚಾಲಕನ ಸಾವಿಗೆ ಕಾರಣ ಏನು ಎಂಬುದು ನಿಖರವಾಗಿ ತಿಳಿದಿಲ್ಲ. ಆದರೆ ಮೇಲಧಿಕಾರಿಗಳ ಕಿರುಕುಳದಿಂದ ಘಟನೆ ನಡೆದಿರುವ ಬಗ್ಗೆ ಆರೋಪ ಕೇಳಿಬರುತ್ತಿವೆ.
ಕೆಲ ದಿನಗಳ ಹಿಂದೆ ಬಸ್ನ ಟೈರ್ (ಸ್ಟೆಪ್ನಿ) ಬದಲಿಸುವ ವಿಷಯದಲ್ಲಿ ಮೇಲಧಿಕಾರಿಗಳ ಜೊತೆಗೆ ಕಿರಿಕಿರಿ ಆಗಿತ್ತು ಎನ್ನಲಾಗಿದೆ. ಚಾಲಕನ ಹತ್ತಿರ ಎರಡು ಮೊಬೈಲ್ ಫೋನ್ ಇದ್ದವು. ಆದರೆ ಆತ್ಮಹತ್ಯೆ ಬಳಿಕ ಶೋಧ ಮಾಡಿದಾಗ ಇವರ ಮೊಬೈಲ್ ಸಿಕ್ಕಿಲ್ಲ ಎಂದು ಗೊತ್ತಾಗಿದೆ.
ಆತ್ಮಹತ್ಯೆ ನಿಗೂಢ ಭೇದಿಸಲು ಪೊಲೀಸರು ತಂಡ ರಚಿಸಿದ್ದಾರೆ. ನ್ಯೂ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲು. ಮರಣೋತ್ತರ ಪರೀಕ್ಷೆಗಾಗಿ ಬ್ರಿಮ್ಸ್ ಆಸ್ಪತ್ರೆಗೆ ಮೃತದೇಹ ರವಾನಿಸಲಾಗಿದೆ. ಆಸ್ಪತ್ರೆ ಎದುರು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಚಾಲಕನು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನಿಗೆ ಅಗಲಿದ್ದಾರೆ.