ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಸಾವು

accident-15
Published on

ಚನ್ನರಾಯಪಟ್ಟಣ : ಬೈಕ್‌ಗೆ ಕೆ.ಎಸ್.ಆರ್.ಟಿ.ಸಿ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಎಂ.ಕೆ.ಹೊಸೂರು ಬಳಿ ಗುರುವಾರ ನಡೆದಿದೆ. ತಾಲ್ಲೂಕಿನ ಬೈಲಾದಕೆರೆ ಗ್ರಾಮದ ಸಣ್ಣವೆಂಕಟಾಭೋವಿ (55) ಮೃತ ಬೈಕ್ ಸವಾರ. ದೇವಸ್ಥಾನದ ಕಲ್ಲಿನ ಕೆಲಸಕ್ಕೆಂದು ಸಣ್ಣವೆಂಕಟಾಭೋವಿ ಅವರು ಬೈಕ್‌ನಲ್ಲಿ ತಾಲ್ಲೂಕಿನ ಕಲ್ಲೇಸೋಮನಹಳ್ಳಿ ಗ್ರಾಮಕ್ಕೆ ಹೋಗುತ್ತಿದ್ದ ವೇಳೆ ಎಂ.ಕೆ.ಹೊಸೂರು ಕಡೆಯಿಂದ ಚನ್ನರಾಯಪಟ್ಟಣ ಕಡೆಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ವೇಗವಾಗಿ ಬಂದು ಬೈಕ್‌ನ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಬಸ್ ಚಕ್ರಕ್ಕೆ ಸಿಲುಕಿ ಗಭೀರವಾಗಿ ಗಾಯಗೊಂಡಿದ್ದರು.

ಕೂಡಲೇ ಸ್ಥಳೀಯರು ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರ ಸಲಹೆ ಮೇರೆಗೆ ಹಾಸನಕ್ಕೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಈ ಬಗ್ಗೆ ಮೃತರ ಮಗ ಕುಮಾರ್ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net