ಬಸ್ ಚಾಲಕರಿಗೆ ಮಾನಸಿಕ ಸ್ಥಿರತೆ ಅಗತ್ಯ -ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ -ಕಾರ್ಯಕರ್ತರ ತರಬೇತಿ ಶಿಬಿರ

IMG-20231130-WA0020.jpg
Published on

ದಾವಣಗೆರೆ: ನಿತ್ಯ ಲಕ್ಷಾಂತರ ಪ್ರಯಾಣಿಕರನ್ನು ಬೆನ್ನಿಗೆ ಕಟ್ಟಿಕೊಂಡು ಸುರಕ್ಷಿತವಾಗಿ ಬಸ್ ಚಲಾಯಿಸುವ ಚಾಲಕರೂ ಕೂಡ ಯೋಧರಿಗೆ ಸಮಾನ. ಅವರು ಮಾನಸಿಕ ಸ್ಥಿರತೆ ಕಾಯ್ದುಕೊಳ್ಳಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಎಐಟಿಯುಸಿ ಸಂಯೋಜಿತ, ಕೆಎಸ್‌ಆರ್‌ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಫೆಡರೇಷನ್‌ನಿಂದ ಹರಿಹರ ಸಮೀಪದ ಮೈತ್ರಿವನದ ಪ್ರೊ.ಬಿ.ಕೃಷ್ಣಪ್ಪ ಭವನದಲ್ಲಿ ಬುಧವಾರ ಆಯೋಜಿಸಿದ್ದ 2 ದಿನಗಳ ರಾಜ್ಯ ಮಟ್ಟದ ಕಾರ್ಯಕರ್ತರ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಸಾರಿಗೆ ಸಂಸ್ಥೆ ಆರ್ಥಿಕವಾಗಿ ಸದೃಢವಾಗಿರಲು ಕೆಎಸ್‌ಆರ್‌ಟಿಸಿ ಸಿಬ್ಬಂದಿ ಶ್ರದ್ಧೆ ಮತ್ತು ಶ್ರಮದಿಂದ ದುಡಿಯುತ್ತಿದೆ. ಚಳವಳಿಗಳ ಚರಿತ್ರೆ, ಸಂಘಟನೆಯ ಸಿದ್ಧಾಂತ, ಅರಿವು, ವರ್ತಮಾನದ ಹೋರಾಟಗಳನ್ನು ನಡೆಸಲು ತರಬೇತಿ ಅಗತ್ಯವಿದೆ. ಇದರ ಪ್ರಯೋಜನ ಪಡೆಯಬೇಕು ಎಂದರು.

ಕೆಎಸ್‌ಆರ್‌ಟಿಸಿ ಸಿಬ್ಬಂದಿಯ ನ್ಯಾಯಯುತ ಬೇಡಿಕೆಗಳ ಬಗ್ಗೆ ನಾನು ಸದಾ ಸ್ಪಂದಿಸಲಿದ್ದು, ಸಿಬ್ಬಂದಿ ನನ್ನನ್ನು ಯಾವಾಗ ಬೇಕಾದೂ ಸಂಪರ್ಕಿಸಬಹುದು. ಸರ್ಕಾರದ ಜತೆ ಮಾತನಾಡಿ ನೆರವು ಒದಗಿಸುವೆ ಎಂದೂ ಭರವಸೆ ನೀಡಿದರು.

ಫೆಡರೇಷನ್ ಗೌರವಾಧ್ಯಕ್ಷ ಡಾ.ಸಿದ್ದನಗೌಡ ಪಾಟೀಲ್ ಮಾತನಾಡಿ, ಮಾನವ ಬಂಧುತ್ವ ವೇದಿಕೆಯು ರಾಜ್ಯದ ಕೇಂದ್ರ ಭಾಗದಲ್ಲಿ ಪ್ರೊ. ಬಿ.ಕೃಷ್ಣಪ್ಪ ಭವನದಲ್ಲಿ ರಾಜ್ಯದ ಎಲ್ಲಾ ಪ್ರಗತಿಪರ ಚಳುವಳಿಗಳಿಗೆ ನೆರವಾಗುತ್ತಿದೆ ಎಂದರು.

ಸತೀಶ್ ಜಾರಕಿಹೊಳಿ ಅವರು ರಾಜ್ಯದಲ್ಲಿ ಕಳೆದೊಂದು ದಶಕದಿಂದ ವೈಚಾರಿಕ ಪ್ರಜ್ಞೆ ಮೂಡಿಸುವ ಕಾಯಕದಲ್ಲಿ ನಿರತರಾಗಿದ್ದಾರೆ. ರಾಜ್ಯದ ಎಲ್ಲಾ ಶಾಸಕರು, ಸಚಿವರು ಇದೇ ಮಾದರಿಯಲ್ಲಿ ಸಂವೇದನಾಶೀಲರಾಗಿ, ವೈಚಾರಿಕ ಹಾಗೂ ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡರೆ ರಾಜ್ಯದಲ್ಲಿ ಪ್ರತಿಗಾಮಿ ಶಕ್ತಿ ಹಾಗೂ ಕುತಂತ್ರಗಳನ್ನು ಹಿಮ್ಮೆಟ್ಟಿಸಬಹುದೆಂದು ಹೇಳಿದರು.

ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಡಾ.ಎ.ಬಿ.ರಾಮಚಂದ್ರಪ್ಪ ಇದ್ದರು. ಕಾರ್ಯಕ್ರಮದಲ್ಲಿ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ವಿಜಯ ಭಾಸ್ಕರ್ ಸ್ವಾಗತಿಸಿದರು.

--

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net