

ಮೈಸೂರು: ಮೈಸೂರು-ನಂಜನಗೂಡು ರಸ್ತೆಯ ದಳವಾಯಿಕೆರೆ ಬಳಿ ಶುಕ್ರವಾರ ಮಧ್ಯಾಹ್ನ ದಂಪತಿ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಕೆಎಸ್ಸಾರ್ಟಿಸಿ ಬಸ್ ಬೈಕ್ ಹ್ಯಾಂಡಲ್‌ಗೆ ತಾಗಿದ್ದರಿಂದ ಬೈಕ್‌ನಿಂದ ಆಯತಪ್ಪಿ ಬಿದ್ದ ಪತ್ನಿ ಬಸ್ ಚಕ್ರಕ್ಕೆ ಸಿಲುಕಿ ಮೃತಪಟ್ಟರೆ, ಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಚನ್ನವಡೆಯನಪುರ ಗ್ರಾಮದ ಮೇಘ(26) ಮೃತರು. ಇವರ ಪತಿ, ಬೈಕ್ ಸವಾರ ಮಹೇಂದ್ರ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಹೇಂದ್ರ ಮತ್ತು ಮೇಘ ತಮ್ಮ ಬೈಕ್‌ನಲ್ಲಿ ಮೈಸೂರಿನ ಸಂಬಂಧಿಕರ ಗೃಹಪ್ರವೇಶಕ್ಕೆ ಆಗಮಿಸಿದ್ದು, ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ ಬೈಕ್‌ನಲ್ಲಿ ಹೋಗುತ್ತಿದ್ದರು. ನಂಜನಗೂಡು ರಸ್ತೆಯ ದಳವಾಯಿಕೆರೆ ಬಳಿ ಹಿಂದಿನಿಂದ ಬಂದ ಕೆಎಸ್ಸಾರ್ಟಿಸಿ ಬಸ್ ಬೈಕ್‌ನ ಹ್ಯಾಂಡಲ್‌ಗೆ ತಾಗಿದೆ. ಇದರಿಂದ ನಿಯಂತ್ರಣ ಕಳೆದುಕೊಂಡ ಬೈಕ್‌ನಿಂದ ಇಬ್ಬರು ಕೆಳಗೆ ಬಿದ್ದಿದ್ದಾರೆ.
ಈ ಸಂದರ್ಭದಲ್ಲಿ ಬೈಕ್‌ನ ಹಿಂಬದಿ ಕುಳಿತ್ತಿದ್ದ ಮೇಘ ಕೆಳಗೆ ಬಿದ್ದ ತಕ್ಷಣ ಅವರ ಮೇಲೆ ಬಸ್ ಚಕ್ರ ಹರಿದು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.