

ಹನೂರು: ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಸೋಮವಾರ ಭಕ್ತರು ಹೆಚ್ಚಿನ ಸಂಖ್ಯೆ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಬಸ್ ಕೊರತೆಯಿಂದ ಪ್ರಯಾಣಿಕರು ನಿಲ್ದಾಣದಲ್ಲಿ ಕಾದು ಕುಳಿತು ತೊಂದರೆ ಅನುಭವಿಸಿದರು.
ಸೋಮವಾರ ಹಾಗೂ ಶುಕ್ರವಾರ ಮಾದಪ್ಪನ ದಿನ ಎಂದು ಪೂಜೆ ಸಲ್ಲಿಸಿ ದೇವರ ದರ್ಶನ ಪಡೆಯಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಮ.ಬೆಟ್ಟಕ್ಕೆ ಆಗಮಿಸುತ್ತಾರೆ. ಇದೀಗ ಶಾಲಾ, ಕಾಲೇಜು ರಜೆ ಇರುವುದರಿಂದ ಸೋಮವಾರ ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ, ಚಾ.ನಗರ ಸೇರಿದಂತೆ ಇತರ ಜಿಲ್ಲೆಗಳಿಂದ ಹೆಚ್ಚಿನ ಭಕ್ತರು ಶ್ರೀ ಕ್ಷೇತ್ರಕ್ಕೆ ಆಗಮಿಸಿದ್ದರು.
ಇನ್ನು ಮ.ಬೆಟ್ಟಕ್ಕೆ ಆಗಮಿಸಿದ್ದ ಭಕ್ತರ ಸಂಖ್ಯೆ ಹೆಚ್ಚಿದ್ದ ಕಾರಣ ಕೆಲವರು 500 ರೂ ವಿಶೇಷ ಟಿಕೆಟ್ ಪಡೆದು ರಾಜಗೋಪುರ ಪ್ರವೇಶ ದ್ವಾರದ ಮೂಲಕ ತೆರಳಿ ದೇವರ ದರ್ಶನ ಪಡೆದರೆ, ಬಹುತೇಕ ಭಕ್ತರು ಸರತಿ ಸಾಲಿನಲ್ಲಿ ತೆರಳಿ ಹಣ್ಣು ಕಾಯಿ ನೀಡಿ ಪೂಜೆ ಸಲ್ಲಿಸಿ ಸ್ವಾಮಿಯ ದರ್ಶನ ಪಡೆದರು. ಕೆಲ ಭಕ್ತರು ದೇಗುಲದ ಮುಂಭಾಗದಲ್ಲಿ ಧೂಪ ಹಾಕಿ ಮಾದಪ್ಪನನ್ನು ನೆನೆದು ಕೈ ಮುಗಿದರು. ಮಧ್ಯಾಹ್ನದ ಹೊತ್ತಿಗೆ ಮ.ಬೆಟ್ಟಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಿತ್ತು. ಬಿಸಲಿನ ನಡುವೆಯೂ ದೇಗುಲದ ಮುಂಭಾಗದಲ್ಲಿ ಭಕ್ತರು ಪೂಜೆ ಪುನಸ್ಕಾರದಲ್ಲಿ ತೊಡಗಿದ್ದರು. ಶ್ರೀಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಎಂದಿನಂತೆ ನೆರಳಿನ ವ್ಯವಸ್ಥೆ, ಕುಡಿಯುವ ನೀರು ಹಾಗೂ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿತ್ತು.
ಬಸ್‌ಗಾಗಿ ಕಾದು ಕುಳಿತ ಭಕ್ತರು: ಮ.ಬೆಟ್ಟಕ್ಕೆ ಸೋಮವಾರ ಬೆಳಗ್ಗೆಯಿಂದಲೇ ಹೆಚ್ಚಿನ ಭಕ್ತರು ಆಗಮಿಸಿದ್ದು, ಸುಮಾರು 12ರ ಹೊತ್ತಿಗೆ ಬಹುತೇಕ ಭಕ್ತರು ಊರಿಗೆ ಹಿಂದಿರುಗಲು ಬಸ್ ನಿಲ್ದಾಣಕ್ಕೆ ಆಗಮಿಸಿದರು. ಆದರೆ ಭಕ್ತರ ಸಂಖ್ಯೆಗೆ ಅನುಗುಣವಾಗಿ ಬಸ್ ಕೊರತೆ ಎದುರಾಯಿತು. ಇದರಿಂದ ಭಕ್ತರು ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಗಂಟೆಗಟ್ಟಲೇ ಕಾದು ಕೂರುವಂತಾಯಿತು. ಬಳಿಕ ಆಗಮಿಸಿದ ಬಸ್ ಹತ್ತಲು ನೂಕುನುಗ್ಗಲು ಉಂಟಾಯಿತು. ಬಹುತೇಕ ಭಕ್ತರು ನಿಂತುಕೊಂಡೇ ಪ್ರಯಾಣ ಬೆಳೆಸಿದರೆ, ಕೆಲ ಭಕ್ತರು ಖಾಸಗಿ ಬಸ್‌ಗಳ ಮೊರೆ ಹೋದರು. ಹಾಗಾಗಿ ಬಸ್ಸಿಗಾಗಿ ಭಕ್ತರು ತೊಂದರೆ ಅನುಭವಿಸುವಂತಾಯಿತು. ಬಸ್ ಅವ್ಯವಸ್ಥೆಯ ಬಗ್ಗೆ ಭಕ್ತರಿಂದ ಆಕ್ಷೇಪ ವ್ಯಕ್ತವಾಯಿತು.