

ಚನ್ನರಾಯಪಟ್ಟಣ: ಪುರಾಣ ಪ್ರಸಿದ್ದ ಶ್ರೀಕ್ಷೇತ್ರ ಕಬ್ಬಳಿ ಶ್ರೀ ಬಸವೇಶ್ವರಸ್ವಾಮಿ ಸನ್ನಿಧಿಯಲ್ಲಿ ಕಾರ್ತೀಕ ಮಾಸದ ಕಡೇ ಸೋಮವಾರದ ಪ್ರಯುಕ್ತ ಶ್ರೀ ಬಸವೇಶ್ವರಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದ್ದು ಭಕ್ತ ಜನಸಾಗರವೇ ಹರಿದು ಬಂದಿತ್ತು.
ಬೆಳಿಗ್ಗೆ 8.30 ರಲ್ಲಿ ಶ್ರೀಕ್ಷೇತ್ರ ಕಬ್ಬಳಿ ಶಾಖಾಮಠದ ಶ್ರೀ ಶಿವಪುತ್ರನಾಥ ಸ್ವಾಮೀಜಿಯವರು ಶ್ರೀ ಬಸವೇಶ್ವರಸ್ವಾಮಿಗೆ ಪ್ರಥಮ ಪೂಜೆ ಸಲ್ಲಿಸಿದರು. ಏಕವಾರು ಅಭಿಷೇಕ, ಪಂಚಾಮೃತಾಭಿಷೇಕ, ಪುಷ್ವಾರ್ಚನೆ, ಕುಂಕುಮಾರ್ಚನೆ ಬಳಿಕ ಒಡವೆ-ವಸ್ತ್ರಗಳ ಅಲಂಕಾರದ ನಂತರ ಪೂಜಾ ಕೈಂಕರ್ಯಗಳು ನೆರವೇರಿದವು.
ಮುಂಜಾನೆಯಿಂದಲೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತಸಮೂಹವು ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ಶ್ರೀ ಬಸವೇಶ್ವರಸ್ವಾಮಿಯ ದರ್ಶನ ಪಡೆದರು. ಸನ್ನಿಧಿಯ ಆವರಣದಲ್ಲಿ ಕಾರು, ಬೈಕ್ ಹಾಗೂ ಟ್ರ್ಯಾಕ್ಟರ್ ಸೇರಿದಂತೆ ವಿವಿಧ ವಾಹನಗಳಿಗೆ ಭಕ್ತರು ಪೂಜೆ ಮಾಡಿಸಿದ್ದು ತೀರ್ಥ ಪ್ರೋಕ್ಷಣೆಯ ಬಳಿಕ ದೇಗುಲದ ಸುತ್ತ ಮೂರು ಬಾರಿ ಪ್ರದಕ್ಷಣೆ ಹಾಕಿದರು.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಶ್ರೀ ಬಸವೇಶ್ವರಸ್ವಾಮಿಯಲ್ಲಿ ಮೊರೆ ಹೋಗುವ ಭಕ್ತರು ತಮ್ಮ ಬೇಡಿಕೆಗಳು ಈಗಾಗಲೇ ಫಲಿಸಿರುವ ಹಿನ್ನೆಲೆಯಲ್ಲಿ ಕಾರ್ತೀಕ ಮಾಸದ ಕಡೇ ಸೋಮವಾರದಂದು ಸನ್ನಿಧಿಗೆ ಆಗಮಿಸಿ ಹರಕೆ ಸಲ್ಲಿಸಿದರು.
ಸನ್ನಿಧಿಯ ಆವರಣದಲ್ಲಿರುವ ನಾಗದೇವತೆಗಳಿಗೆ ಮಹಿಳೆಯರು ಪೂಜೆ ಸಲ್ಲಿಸಿ ಬಸವ ಮೂರ್ತಿಗೆ ಕ್ಷೀರಾಭಿಷೇಕ ಮಾಡಿದರು. ಕಲ್ಯಾಣಿಯಲ್ಲಿ ಗಂಗಾಪೂಜೆ ಸಲ್ಲಿಸಿದ ಬಳಿಕ ಸನ್ನಿಧಿಯ ಎದುರಲ್ಲಿ ಹಣ್ಣು-ಕಾಯಿ ಸಮರ್ಪಿಸಿ ಗಂಧ-ಕರ್ಪೂರ ಬೆಳಗಿಸಿದರು.
ಶ್ರೀಕ್ಷೇತ್ರಕ್ಕೆ ಒಂದಲ್ಲಾ ಒಂದು ಬೇಡಿಕೆಗಳನ್ನು ಹೊತ್ತು ಬರುವ ಭಕ್ತರು ಬೇಡಿಕೆ ಈಡೇರಿಸುವಂತೆ ಶ್ರೀ ಬಸವೇಶ್ವರ ಸ್ವಾಮಿಯಲ್ಲಿ ಹರಕೆ ಕಟ್ಟಲಿದ್ದು, ಸಮಾನ್ಯವಾಗಿ ಕಂಕಣ ಭಾಗ್ಯ, ಸಂತಾನ ಭಾಗ್ಯ, ಜಮೀನು ಮತ್ತು ವಾಹನಗಳ ಖರೀದಿ, ಕಂಟಕ, ಚರ್ಮರೋಗ, ಸರ್ಪದೋಷ ನಿವಾರಣೆ, ದನ-ಜಾನುವಾರುಗಳಿಗೆ ರೋಗ-ರುಜುನುಗಳ ನಿವಾರಣೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಹರಕೆ ಮಾಡಿಕೊಂಡರು.
ಹಾಸನ ವ್ಯಾಪ್ತಿಯಿಂದಲ್ಲದೇ ಬೆಂಗಳೂರು, ಮೈಸೂರು, ಮಂಡ್ಯ, ತುಮಕೂರು ಸೇರಿದಂತೆ ರಾಜ್ಯದ ವಿವಿದೆಡೆಯಿಂದ ಆಗಮಿಸಿದ್ದ ಭಕ್ತರು ಶ್ರೀ ಬಸವೇಶ್ವರಸ್ವಾಮಿಗೆ ಪೂಜೆ ಸಲ್ಲಿಸಿ ಹರಕೆ ತೀರಿಸಿದರು. ಶ್ರೀಕ್ಷೇತ್ರದ ಸುತ್ತಮುತ್ತಲ ಗ್ರಾಮದ ರೈತರು ತಮ್ಮ ಜಾನುವಾರುಗಳನ್ನು ಕರೆತಂದು ದೇಗುಲದ ಸುತ್ತ ಪ್ರದಕ್ಷಣೆ ಬಂದ ಬಳಿಕ ತೀರ್ಥ ಪ್ರೋಕ್ಷಣೆ ಹಾಕಿಸಿದರು.
''ಸನ್ನಿಧಿಯಲ್ಲಿ ಹರಕೆ ಹೊತ್ತ ಸ್ವಲ್ಪ ದಿನಗಳಲ್ಲಿಯೇ ಕಷ್ಟ ನಿವಾರಣೆಯಾಗಿ ಇಷ್ಟಾರ್ಥಗಳು ಫಲಿಸುತ್ತವೆ. ಹಿನ್ನೆಲೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸಿ ಹರಕೆ ಸಲ್ಲಿಸುತ್ತಾರೆ, ಈ ಪುಣ್ಯ ಕ್ಷೇತ್ರಕ್ಕೆ ಬರುವ ಭಕ್ತರು ಬರಿಗೈಯಲ್ಲಿ ಯಾರು ಹಿಂದಿರುಗಿಲ್ಲ''-ಶಿವಶಂಕರಯ್ಯ, ಸಿದ್ದರಹಟ್ಟಿ ತಿಪಟೂರು ತಾಲೂಕು.