

ಚಿತ್ರದುರ್ಗ: ವೀರಶೈವ ಸಮಾಜ ಜಿಲ್ಲಾ ಘಟಕದಿಂದ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವೇಶ್ವರರ ಜಯಂತ್ಯುತ್ಸವದ ಅಂಗವಾಗಿ ಮೇ 10ರಂದು ಸಂಜೆ 4ಕ್ಕೆ ಭಾವಚಿತ್ರ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.
ಅಂದು ನೀಲಕಂಠೇಶ್ವರ ಸ್ವಾಮಿ ದೇಗುಲದಿಂದ ವಿವಿಧ ಜನಪದ ಕಲಾತಂಡಗಳೊಂದಿಗೆ ಆರಂಭವಾಗುವ ಮೆರವಣಿಗೆ ಗಾಂಧಿ ವೃತ್ತ, ಆನೆಬಾಗಿಲು, ಚಿಕ್ಕಪೇಟೆ, ದೊಡ್ಡಪೇಟೆ, ರಂಗಯ್ಯನ ಬಾಗಿಲು, ಬಸವ ಮಂಟಪ, ಅಂಬೇಡ್ಕರ್ ವೃತ್ತ, ಬಿ.ಡಿ.ರಸ್ತೆ ಸೇರಿ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿದ ನಂತರ ಮರಳಿ ದೇಗುಲದ ಬಳಿ ಮುಕ್ತಾಯವಾಗಲಿದೆ.
ವೀರಶೈವ ಯುವ ಸಂಘಟನೆಯಿಂದ 9ರಂದು ಮಧ್ಯಾಹ್ನ 3.30ಕ್ಕೆ ಬೈಕ್ ರ‌್ಯಾಲಿ ಆಯೋಜಿಸಿದ್ದು, ನೀಲಕಂಠೇಶ್ವರ ಸ್ವಾಮಿ ದೇಗುಲದಿಂದ ಆರಂಭವಾಗಲಿದೆ. ಈ ಎರಡೂ ಕಾರ್ಯಕ್ರಮಗಳಲ್ಲೂ ಬಸವ ಅನುಯಾಯಿಗಳು, ಭಕ್ತರು, ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಸಮಾಜದ ಅಧ್ಯಕ್ಷ ಎಚ್.ಎನ್.ತಿಪ್ಪೇಸ್ವಾಮಿ ಕೋರಿದ್ದಾರೆ.
ರಕ್ತದಾನ ಶಿಬಿರ 10ಕ್ಕೆ: ವೀರಶೈವ ಸಮಾಜ, ಪ್ರಥಮ್ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಬಸವ ಜಯಂತಿ ಅಂಗವಾಗಿ ನೀಲಕಂಠೇಶ್ವರ ಸಮುದಾಯ ಭವನದಲ್ಲಿ 10ರಂದು ಬೆಳಗ್ಗೆ 9ಕ್ಕೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಶಿಬಿರ ಮಧ್ಯಾಹ್ನ 12.30ರವರೆಗೆ ನಡೆಯಲಿದ್ದು, ದಾನಗಳಲ್ಲಿ ಇದೂ ಶ್ರೇಷ್ಠವಾಗಿದೆ. ಅಲ್ಲದೆ, ಆರೋಗ್ಯ ವೃದ್ಧಿಯಾಗುತ್ತದೆ. ಆದ್ದರಿಂದ 18 ವರ್ಷ ಮೇಲ್ಪಟ್ಟ ಆರೋಗ್ಯವಂತರು ಭಾಗಿಯಾಗಿ, ರಕ್ತದಾನಕ್ಕೆ ಮುಂದಾಗಬೇಕು ಎಂದು ಸಂಸ್ಥೆಯ ಅಧ್ಯಕ್ಷ ನಂಜುಂಡೇಶ್ವರ ಮನವಿ ಮಾಡಿದ್ದಾರೆ.