

ಚಿತ್ರದುರ್ಗ: ಸಾಂಸ್ಕೃತಿಕ ನಾಯಕ, ಮಹಾಮಾನವತವಾದಿ, ವಿಶ್ವಗುರು, ಬಸವಣ್ಣ ಅವರ ಜಯಂತ್ಯುತ್ಸವದ ಅಂಗವಾಗಿ ನಗರದಲ್ಲಿ ಶುಕ್ರವಾರ ಬಸವೇಶ್ವರರ ಭಾವಚಿತ್ರ ಮೆರವಣಿಗೆ ಅದ್ದೂರಿಯಾಗಿ ಜರುಗಿತು.
ಬೆಳ್ಳಿ ವರ್ಣದ ಸಾರೋಟಿನಲ್ಲಿ ಬಸವೇಶ್ವರರ ಭಾವಚಿತ್ರ ಪ್ರತಿಷ್ಠಾಪಿಸಿ, ವಿವಿಧ ಬಗೆಯ ಪುಷ್ಪಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಜಿಲ್ಲಾ ವೀರಶೈವ ಸಮಾಜದಿಂದ ಆಯೋಜಿಸಿದ್ದ ಮೆರವಣಿಗೆಗೆ ನೀಲಕಂಠೇಶ್ವರ ಸ್ವಾಮಿ ಸನ್ನಿಧಿ ಬಳಿ ಬಸವಪ್ರಭು ಶ್ರೀ, ಜಯ ಬಸವಕುಮಾರ ಶ್ರೀ ಚಾಲನೆ ನೀಡಿದರು.
ವೀರಗಾಸೆ, ನಾದಸ್ವರ, ಮಹಿಳಾ ತಮಟೆ, ಉರುಮೆ, ಡೊಳ್ಳು, ತ್ರ್ಯಾಶ್, ಕೀಲು ಕುದುರೆ, ತಟ್ಟೆರಾಯ, ಗೊಂಬೆ ವೇಷಧಾರಿಗಳು ಸೇರಿ ವಿವಿಧ ಜಾನಪದ ಕಲಾತಂಡಗಳು ಮೆರುಗು ನೀಡಿದವು.
ಮೆರವಣಿಗೆಯಲ್ಲಿದ್ದ ಹಲವರ ಶಲ್ಯ, ಟೋಪಿಗಳಲ್ಲಿ ಬಸವೇಶ್ವರರ ಭಾವಚಿತ್ರ ರಾರಾಜಿಸಿತು. ಗಾಂಧಿ ವೃತ್ತದ ಬಳಿ ಡಿ.ಜೆ.ಸದ್ದಿಗೆ ಯುವ ಪಡೆ ಅರ್ಧ ತಾಸಿಗೂ ಹೆಚ್ಚು ಹೊತ್ತು ಮೈಮರೆತು ಕುಣಿದು ಸಂಭ್ರಮಿಸಿದರು.
ಆನೆಬಾಗಿಲು, ಚಿಕ್ಕಪೇಟೆ, ದೊಡ್ಡಪೇಟೆ, ರಂಗಯ್ಯನಬಾಗಿಲು, ಬಸವಮಂಟಪ ರಸ್ತೆ, ಅಂಬೇಡ್ಕರ್ ವೃತ್ತ, ಬಿ.ಡಿ.ರಸ್ತೆ ಮಾರ್ಗವಾಗಿ ಸಂಚರಿಸಿ ಪುನಃ ದೇಗುಲ ತಲುಪಿತು.
ಇದೇ ವೇಳೆ ಮಾಜಿ ಶಾಸಕ ಎಸ್.ಕೆ.ಬಸವರಾಜನ್, ಜಿಪಂ ಕೆಡಿಪಿ ಸದಸ್ಯ ಕೆ.ಸಿ.ನಾಗರಾಜ್ ಅವರಿಗೆ ಸನ್ಮಾನಿಸಲಾಯಿತು. ವೀರಶೈವ ಸಮಾಜದ ಅಧ್ಯಕ್ಷ ತಿಪ್ಪೇಸ್ವಾಮಿ, ಮುಖಂಡರಾದ ಸುರೇಶ್‌ಬಾಬು, ಮಲ್ಲಿಕಾರ್ಜುನ್, ಮಂಜುನಾಥ್, ಜೀತೇಂದ್ರ, ಮಹಡಿ ಶಿವಮೂರ್ತಿ, ಮೋಕ್ಷಾ ರುದ್ರಸ್ವಾಮಿ ಇತರರಿದ್ದರು.