ಮಳೆಗಾಲ, ಕೊಳಚೆ, ದುರ್ವಾಸನೆ, ಬೇಸಿಗೆ, ಧೂಳು, ಶಿಗ್ಗಾಂವಿ, ಪುರಸಭೆ, Monsoon, Sewer, Stink, Summer, Dust, Shiggavi, Municipality,
ಶಿಗ್ಗಾಂವಿ: ಪಟ್ಟಣದ ಹೊಸಬಸ್ ನಿಲ್ದಾಣದ ಎದುರಿಗೆ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ 21ನೇ ವಾರ್ಡ್ ವ್ಯಾಪ್ತಿಯ ಬಸವೇಶ್ವರ ನಗರ ರಸ್ತೆ, ಚರಂಡಿ ಸೇರಿದಂತೆ ಮೂಲಸೌಲಭ್ಯಗಳಿಂದ ವಂಚಿತವಾಗಿದೆ. ಇಲ್ಲಿನ ಸಮಸ್ಯೆ ಕುರಿತು ಪುರಸಭೆ ಗಮನಕ್ಕೆ ತಂದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಸವೇಶ್ವರ ನಗರದಲ್ಲಿ 200ಕ್ಕಿಂತ ಹೆಚ್ಚಿನ ಮನೆಗಳಿವೆ. ರೈತಾಪಿ ಕುಟುಂಬ, ನೌಕರಸ್ಥರು, ವ್ಯಾಪಾಸ್ಥರು ಹೆಚ್ಚಾಗಿ ವಾಸವಾಗಿದ್ದಾರೆ. ಇಲ್ಲಿನ ಬಡಾವಣೆಗಳಲ್ಲಿ ಮಳೆಗಾಲದಲ್ಲಿ ರಸ್ತೆಯಲ್ಲಿನ ಮಳೆ ನೀರು ಹರಿದು ಹೋಗದೆ ಒಂದೆಡೆ ನಿಂತು ದುರ್ವಾಸನೆ ಹರಡುತ್ತಿದೆ. ಹಲವು ವರ್ಷಗಳಿಂದ ಇಲ್ಲಿನ ಚರಂಡಿ, ರಸ್ತೆಗಳು ಸುಧಾರಣೆ ಕಂಡಿಲ್ಲ. ಮಳೆಗಾಲದಲ್ಲಿ ರಸ್ತೆಗಳೆಲ್ಲ ಕೆಸರು ಗದ್ದೆಗಳಂತಾಗುತ್ತವೆ. ಕೆಸರಿನಲ್ಲಿ ವಾಹನಗಳ ಸಂಚಾರಕ್ಕಾಗಿ ಪರದಾಡುವಂತಾಗುತ್ತದೆ. ಚಳಿಗಾಲ, ಬೇಸಿಗೆಯಲ್ಲಿ ನಗರದ ವಾತಾವರಣ ಧೂಳುಮಯವಾಗಿರುತ್ತದೆ. ಪ್ರತಿನಿತ್ಯ ಶಾಲಾ, ಕಾಲೇಜ್ಗಳಿಗೆ ಹೋಗುವ ಮಕ್ಕಳು ಮತ್ತು ವೃದ್ಧರು ಧೂಳಿನಿಂದ ತೀವ್ರ ತೊಂದರೆ ಅನುಭವಿಸುವಂತಾಗಿದೆ. ರಸ್ತೆಯಲ್ಲಿನ ತಗ್ಗು- ಗುಂಡಿಗಳಿಂದ ವಾಹನ ಸವಾರರಿಗೆ ಮತ್ತು ಪಾದಚಾರಿಗಳಿಗೆ ಕಿರಿಕಿರಿಯಾಗುತ್ತಿದೆ.
ಪಟ್ಟಣದಲ್ಲಿರುವ ಹಳೆಯ ಮನೆ ಬಿಟ್ಟು 1987ರಿಂದ ಬಸವೇಶ್ವರ ನಗರದಲ್ಲಿ ವಾಸಿಸುತ್ತಿದ್ದೇವೆ. ಆಗಿನಿಂದಲೂ ಈ ಬಡಾವಣೆ ಮೂಲಸೌಕರ್ಯಗಳಿಂದ ವಂಚಿತವಾಗಿದೆ. ಹಿಂದಿನ ಅವಧಿಯ ವಾರ್ಡ್ ಸದಸ್ಯರಿಗೆ ಹಲವು ಬಾರಿ ಮನವಿ ಮಾಡಿದರೂ ಸೌಕರ್ಯ ಕಲ್ಪಿಸಲಿಲ್ಲ. ಈಗಿರುವ ಸದಸ್ಯರಿಗೂ ಹಲವು ಬಾರಿ ಅಭಿವೃದ್ಧಿ ಕುರಿತು ತಿಳಿಸಿದ್ದೇವೆ. ಪುರಸಭೆ ಅಧಿಕಾರಿಗಳಿಗೂ ಮನವಿ ಸಲ್ಲಿಸಲಾಗಿದೆ. ಆದರೂ, ಯಾವುದೇ ಪ್ರಯೋಜನವಾಗಿಲ್ಲ ಎಂದು ಬಡಾವಣೆ ನಿವಾಸಿ, ಆರೋಗ್ಯ ಇಲಾಖೆ ನಿವೃತ್ತ ನೌಕರ ಚಂದ್ರಶೇಖರ ಕಮ್ಮಾರ ಅಳಲು ತೋಡಿಕೊಂಡಿದ್ದಾರೆ.
ವಾರ್ಡ್ ಅಭಿವೃದ್ಧಿ ಬಗ್ಗೆ ಈ ಮೊದಲೇ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸ್ಥಳೀಯ ಬಸವೇಶ್ವರ ನಗರ ಅಭಿವೃದ್ಧಿಯಾಗದಿರುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೂ ಇದೆ. ಈಗಾಗಲೇ ಮುಖ್ಯಮಂತ್ರಿಗಳಿಂದ ವಿಶೇಷ ಅನುದಾನದ ಭರವಸೆ ದೊರೆತಿದ್ದು, ಶೀಘ್ರದಲ್ಲಿಯೇ ಬಸವೇಶ್ವರ ನಗರದ ಅಭಿವೃದ್ಧಿಗೆ ಚಾಲನೆ ನೀಡಲಾಗುವುದು.
| ಜಗದೀಶ ವೈ.ಕೆ. ಪುರಸಭೆ ಮುಖ್ಯಾಧಿಕಾರಿ ಶಿಗ್ಗಾಂವಿ