

ಬಸವನಬಾಗೇವಾಡಿ: ಪುರಾತನ ಕಾಲದಿಂದ ವಿರಾಜಮಾನವಾದ ಬಸವೇಶ್ವರ (ಮೂಲನಂದೀಶ್ವರ) ಜಾತ್ರಾ ಮಹೋತ್ಸವವು ಪ್ರತಿವರ್ಷದ ಪದ್ದತಿಯಂತೆ ಶ್ರಾವಣ ಮಾಸದ 3ನೇ ಸೋಮವಾರ ಸೆ. 4ರಿಂದ 8ರವರೆಗೆ 5ದಿನಗಳ ಕಾಲ ಧಾರ್ಮಿಕ, ಸಾಂಸ್ಕೃತಿಕ, ಸಾಹಿತಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ಜರುಗಲಿದೆ.
ಸೆ. 4ರಂದು ಬೆಳಗ್ಗೆ 9.30ಕ್ಕೆ ಬಸವೇಶ್ವರ ದೇವಸ್ಥಾನದಿಂದ ಸಹಸ್ರಾರು ಭಕ್ತರು ಸಕಲ ವಾದ್ಯವೈಭವದೊಂದಿಗೆ ವಿರಕ್ತಮಠಕ್ಕೆ ಹೋಗಿ ಮುರಘೇಂದ್ರ ಸ್ವಾಮಿಗಳನ್ನು ಹಾಗೂ ಪಟ್ಟಣದ ವಿರಕ್ತಮಠದ ಸಿದ್ಧಲಿಂಗ ಶ್ರೀಗಳು, ಈರಕಾರ ಮುತ್ಯಾ ಅವರನ್ನು ದೇವಸ್ಥಾನಕ್ಕೆ ಬರಮಾಡಿಕೊಳ್ಳುವರು. 10ಕ್ಕೆ ಅಲಂಕೃತ ಉತ್ಸವ ಮೂರ್ತಿಯನ್ನು ಹೊತ್ತ ಬೆಳ್ಳಿ ಪಲಕ್ಕಿಯೊಂದಿಗೆ ಬಸವೇಶ್ವರ ದೇವಸ್ಥಾನದಿಂದ ಆನೆ, ಅಂಬಾರಿ ಭವ್ಯ ಮೆರವಣಿಗೆ ಮೂಲಕ ಹೊರಿಮಟ್ಟಿ ಗುಡ್ಡಕ್ಕೆ ತೆರಳುವುದು. ನಂತರ ಈರಕಾರ ಮುತ್ಯಾ ಅವರಿಂದ ಈ ವರ್ಷದ ಮಳೆಬೆಳೆ ನುಡಿಮುತ್ತು ಹೇಳಲಾಗುವುದು. ಸಂಜೆ 7ಕ್ಕೆ ಪಟ್ಟಣದ ತಾಳಿಕೋಟೆ ರಸ್ತೆಯಲ್ಲಿರುವ ಕಂಬಿ ಕಟ್ಟೆಗೆ ಆಗಮಿಸಿದ ಪಲಕ್ಕಿ ಉತ್ಸವವನ್ನುದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಗುವುದು. ಬಸವೇಶ್ವರ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಆಕರ್ಷಕ ಮನಮೋಹಕ ಬಾಣ ಬಿರುಸು ಸಿಡಿ ಮದ್ದುಗಳನ್ನು ಸುಡಲಾಗುವುದು.
ಸೆ. 5ರಂದು ಬೆಳಗ್ಗೆ 9ಕ್ಕೆ ಗೀಗೀ ಪದ, ಚೌಡಕಿ ಪದ, ಡೊಳ್ಳು, ಭಜನಾ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮಧ್ಯಾಹ್ನ 3ಕ್ಕೆ ಜಂಗಿ ಕುಸ್ತಿ, ಸಂಝೆ 5.30ಕ್ಕೆ ಮಲ್ಲಕಂಬ ಪ್ರದರ್ಶನಗೊಳ್ಳಲಿದೆ.
ಸೆ. 6ರಂದು ಬೆಳಗ್ಗೆ 9ಕ್ಕೆ ಶಕ್ತಿ ಪ್ರದರ್ಶಕರಿಂದ ಕಸರತ್ತಿನ ಪ್ರದರ್ಶನಗಳು ಹಾಗೂ ಭಾರ ಎತ್ತುವ ಸ್ಪರ್ಧೆ ಜರುಗಲಿದೆ. ಮಧ್ಯಾಹ್ನ 3ಕ್ಕೆನಿರ್ಣಾಯಕ ಜಂಗಿ ಕುಸ್ತಿಗಳು ಜರುಗಲಿವೆ. ಸೆ. 7ರಂದು ಬೆಳಗ್ಗೆ 10ಕ್ಕೆ ಜಾನಪದ ಕಲಾ ಪ್ರದರ್ಶನ, ಸಂಜೆ 7ಕ್ಕೆ ಹಾಸ್ಯ ರಸಮಂಜರಿ ಜರುಗಲಿದೆ.