ಬಸವೇಶ್ವರ, ಕೆಂಚಾಂಬ ದೇವಿ ರಥೋತ್ಸವ ಅದ್ದೂರಿ

Basaveshwara Swamy
Published on

ಚಿತ್ರದುರ್ಗ: ತಾಲೂಕಿನ ಸಜ್ಜನಕೆರೆಯ ಕೆರೆಕೋಡಿ ಬಸವೇಶ್ವರ ಸ್ವಾಮಿ, ಸೊಂಡೇಕೆರೆ ಗ್ರಾಮದೇವತೆ ಕೆಂಚಾಂಬ ದೇವಿಯ ಮಹಾರಥೋತ್ಸವವೂ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸೋಮವಾರ ಅದ್ದೂರಿಯಾಗಿ ಜರುಗಿತು.

ಅಣ್ಣ ಬಸಪ್ಪ ಸ್ವಾಮಿ, ತಂಗಿ ಕೆಂಚಾಂಬ ದೇವಿಯ ದೊಡ್ಡ-ಚಿಕ್ಕ ರಥವನ್ನು ಎಳೆಯುವ ಕ್ಷಣಕ್ಕಾಗಿ ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಅನೇಕ ಭಕ್ತರು ಕಾತರದಿಂದ ಕಾಯುತ್ತಿದ್ದರು.

ಚಾಲನೆ ದೊರೆಯುತ್ತಿದ್ದಂತೆ ಬಸವೇಶ್ವರ ಸ್ವಾಮಿ ಕೀ ಜೈ, ಹರಹರ ಮಹಾದೇವ್, ಕೆಂಚಾಂಬ ದೇವಿಗೆ ಜೈ ಎಂದು ಜಯಘೋಷ ಮೊಳಗಿಸಿದರು. ಭಕ್ತೋತ್ಸಾಹ ಮುಗಿಲುಮುಟ್ಟಿತ್ತು.

ರಥಕ್ಕೆ ಬಾಳೆಹಣ್ಣನ್ನು ಎಸೆಯುವ ಮೂಲಕ ಭಕ್ತಿ ಸಮರ್ಪಿಸಿದರು. ರಥೋತ್ಸವದ ಅಂಗವಾಗಿ ಬಸವೇಶ್ವರ ಸ್ವಾಮಿಗೆ ಮುಂಜಾನೆ ಮಹಾರುದ್ರಾಭಿಷೇಕ ಸೇರಿ ಇತರೆ ಪೂಜಾ ಕೈಂಕರ್ಯ ಶಾಸ್ತ್ರೋಕ್ತವಾಗಿ ನೆರವೇರಿದವು. ಭಾನುವಾರ ಕೆಂಚಾಂಬ ದೇವಿಯ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ರಥೋತ್ಸವಕ್ಕೂ ಮುನ್ನ ಸ್ವಾಮಿಯ ಮೂರ್ತಿಯನ್ನು ದೇಗುಲದ ಸಮೀಪವಿರುವ ಗದ್ದಗೆ ಬಳಿ ಪುಷ್ಪಾಲಂಕೃತ ಪಲ್ಲಕ್ಕಿಯಲ್ಲಿ ಕರೆತಂದು ಪೂಜೆ ಸಲ್ಲಿಸಲಾಯಿತು. ನಂತರ ಎರಡೂ ದೇವರ ಉತ್ಸವ ಮೂರ್ತಿಗಳನ್ನು ರಥದ ಬಳಿ ಕರೆತಂದು ಮೂರು ಬಾರಿ ಪ್ರದಕ್ಷಿಣೆ ಹಾಕಿಸಿ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ರಥ ಎಳೆದು ಅನೇಕರು ಪುನೀತರಾದರು. ಇಷ್ಟಾರ್ಥ ಈಡೇರಿಸುವಂತೆ ಪ್ರಾರ್ಥಿಸಿಕೊಂಡರು. ಮೇ 14ರಂದು ಓಕುಳಿ ಸೇವೆ, ಭಕ್ತರಿಗೆ ಪ್ರಸಾದ ವಿನಿಯೋಗ ಹಮ್ಮಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net