ಬಸವಾದಿ ಶರಣರಿಗೂ ಮಾರ್ಗದರ್ಶಕರು ದೇವರ ದಾಸಿಮಯ್ಯ

02_HSN_07A
Published on

ಹಾಸನ: ದೇವರ ದಾಸಿಮಯ್ಯ ಅವರು ಕೇವಲ ಒಂದು ಜಾತಿ, ಧರ್ಮಕ್ಕೆ ಸೀಮಿತವಾಗದೆ ಸಮಸ್ತ ಕುಲ ಕೋಟಿಗೆ ಸೇರಿದವರಾಗಿದ್ದಾರೆ. ಇವರು ವಚನ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಅಪಾರವಾದದ್ದು ಎಂದು ನಗರಸಭೆ ಅಧ್ಯಕ್ಷರಾದ ಚಂದ್ರೇಗೌಡ ಅವರು ತಿಳಿಸಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಹಾಸನಾಂಬ ಕಲಾಕ್ಷೇತ್ರದಲ್ಲಿ ಬುಧವಾರ ಆಯೋಜಿಸಿದ್ದ ಶ್ರೀ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಗರದ ಆರ್.ಸಿ ರಸ್ತೆಯಲ್ಲಿ ದೇವರ ದಾಸಿಮಯ್ಯ ಅವರ ಸರ್ಕಲ್ ನಿರ್ಮಿಸಿರುವುದು ಎಲ್ಲರಿಗೂ ಸಂತಸದ ವಿಷಯವಾಗಿದೆ. ಕ್ರಿಯೆ ಜ್ಞಾನದಿಂದ ಉತ್ತಮ ಮನುಷ್ಯರಾಗಬಲ್ಲಿರಿ ಎಂದು ದೇವರ ದಾಸಿಮಯ್ಯ ಅವರು ಹೇಳಿದ್ದಾರೆ. ಇವರು ದೇವರಿಗೆ ಪ್ರಶ್ನೆ ಮಾಡಿದ ಮಹಾನ್ ಮೇದಾವಿ ಆಗಿದ್ದಾರೆ ಎಂದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಬಿ.ಪಿ ಕೃಷ್ಣೇಗೌಡ ಅವರು ಮಾತನಾಡಿ, ದೇವರ ದಾಸಿಮಯ್ಯ ಅವರು 12ನೇ ಶತಮಾನದಲ್ಲಿ ಗದಗ ಜಿಲ್ಲೆಯಲ್ಲಿ ಜನಿಸಿದರು. ಇವರು ನೇಕಾರರಾಗಿದ್ದಾರೆ, ದೇಹದ ಸಂರಕ್ಷಣೆಗಾಗಿ ವಸ್ತ್ರವನ್ನು ತಯಾರಿಸುವ ಮೂಲಕ ಸಮಾಜದ ಮಾನವ ಕುಲಕ್ಕೆಲ್ಲ ಅನುಕೂಲ ಮಾಡಿಕೊಟ್ಟಿದ್ದಾರೆ. ಅವರ ವಚನ, ಜೀವನ ಶೈಲಿ, ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.

ಸಾಹಿತಿ ಗೊರೂರು ಅನಂತರಾಜು ಅವರು ಮಾತನಾಡಿ, ನೇಯ್ಗೆ ಕಾಯಕದ ಅವತಾರ ಪುರುಷ ದೇವರ ದಾಸಿಮಯ್ಯ ಅವರಾಗಿದ್ದಾರೆ. ಇವರು ಬಸವಾದಿ ಶರಣರಿಗೂ ಮಾರ್ಗದರ್ಶಕರಾಗಿದ್ದವರು. ನೇಯ್ಗೆ ವೃತ್ತಿಯಿಂದ ಕಾಯಕಕ್ಕೆ ಬುನಾದಿ ಹಾಕಿದವರು, ವಚನ ಸಾಹಿತ್ಯಕ್ಕೆ ಪೀಠಿಕೆ ಬರೆದು ಮುನ್ನುಡಿ ಹಾಕಿದವರು ದೇವರ ದಾಸಿಮಯ್ಯ. ಶರಣರ ತತ್ವಗಳನ್ನು ಪ್ರಚಾರ ಮಾಡಿದವರಾಗಿದ್ದಾರೆ. ಬಸವಣ್ಣನವರು ಕೂಡ ಇವರ ಕುರಿತು ವಚನಗಳಲ್ಲಿ ಹಾಡಿ ಹೊಗಳಿದ್ದಾರೆ ಎಂದು ದೇವರ ದಾಸಿಮಯ್ಯ ಅವರ ಕುರಿತು ಸವಿವರವಾಗಿ ಉಪನ್ಯಾಸ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯ ತಹಸೀಲ್ದಾರ್ ಎಲ್. ರಮೇಶ್ ಅವರು ಮಾತನಾಡಿ, ಮಹನೀಯರು ಹಾಕಿ ಕೊಟ್ಟಿರುವ ಉತ್ತಮ ಸಂದೇಶಗಳ ಹಾದಿಯಲ್ಲಿ ನಾವೆಲ್ಲರೂ ನಡೆಯಲು ಸರ್ಕಾರ ಈ ಜಯಂತಿಗಳನ್ನು ಆಚರಣೆ ಮಾಡುತ್ತ ಬರುತ್ತಿದೆ. ಈ ಮಹನೀಯರು ತಮ್ಮ ವಚನಗಳ ಮೂಲಕ ಸಮಾಜವನ್ನು ತಿದ್ದುವಂತಹ ಕೆಲಸಗಳನ್ನು ಮಾಡಿದ್ದಾರೆ. ಇವರುಗಳನ್ನು ನಾವೆಲ್ಲರೂ ಸ್ಮರಿಸೋಣ ಅವರ ಹಾದಿಯಲ್ಲಿ ನಡೆಯೋಣ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಚ್.ಪಿ ತಾರಾನಾಥ್, ತಹಸೀಲ್ದಾರ್ ಮೋಹನ್ ಕುಮಾರ್, ಹಾಸನ ನೌಕರ ಸಂಘದ ಗೌವಾಧ್ಯಕ್ಷ ಈ.ಕೃಷ್ಣೇಗೌಡ ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

ಮೆರವಣಿಗೆಗೆ ಚಾಲನೆ

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶ್ರೀ ದೇವರ ದಾಸಿಮಯ್ಯ ಜಯಂತಿಗೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಶಾಸಕ ಸ್ವರೂಪ್ ಪ್ರಕಾಶ್ ಹಾಗೂ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಅವರು ದೇವರ ದಾಸಿಮಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರೊಂದಿಗೆ ಮೆರವಣಿಗೆಗೆ ಚಾಲನೆ ನೀಡಿದರು.

ನಂತರ ಮಾತನಾಡಿದ ಶಾಸಕ ಸ್ವರೂಪ್ ಪ್ರಕಾಶ್, ಜಯಂತಿಗೆ ಹೆಚ್ಚು ಮಹಿಳೆಯರು ಬಂದಿರುವುದು ವಿಶೇಷವಾಗಿದೆ. ನೇಕಾರ ಸಮಾಜ ಆರ್ಥಿಕವಾಗಿ, ರಾಜಕೀಯವಾಗಿ ಬೆಳೆಯಲಿ ಎಂದು ಆಶಿಸಿ ಜಯಂತಿಯ ಶುಭಾಶಯಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಚ್.ಪಿ ತಾರಾನಾಥ್ ಹಾಗೂ ಸಮುದಾಯದ ಮುಖಂಡರು ಹಾಗೂ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net