ಬಸವಾದಿ ಶರಣರ ಸಾಲಿನಲ್ಲಿ ನಿಲ್ಲುವ ಮಂಟೇಸ್ವಾಮಿ

Published on

ಚಾಮರಾಜನಗರ : ಬಸವಾದಿ ಶರಣರ ಸಾಲಿನಲ್ಲಿ ಪವಾಡ ಪುರುಷ ಶ್ರೀಮಂಟೇಸ್ವಾಮಿ ನಿಲ್ಲುತ್ತಾರೆ ಎಂದು ಮರಿಯಾಲ ಮಠದ ಶ್ರೀಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಸಮೀಪದಲ್ಲಿರುವ ಕರಿನಂಜನಪುರ ಗ್ರಾಮದಲ್ಲಿ ಶ್ರೀಮಂಟೇಸ್ವಾಮಿ ದೇವರ ಗುಡ್ಡರ ದೇವಸ್ಥಾನ ಸೇವಾ ಟ್ರಸ್ಟ್ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ನಾಮಫಲಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಶ್ರೀಮಂಟೇಸ್ವಾಮಿ ಪರಂಪರೆ ಆಚಾರ-ವಿಚಾರಗಳು ಮತ್ತು ಸಂಸ್ಕೃತಿಯಲ್ಲಿ ಬಸವಾದಿ ಶರಣರ ಚಿಂತನೆಗಳು ಇದೆ. ರಾಚಪ್ಪಾಜಿಯವರು ಸಹ ಬಸವಣ್ಣ ಅವರ ಶಿಷ್ಯರಾಗಿದ್ದರು ಎಂದು ತಿಳಿಸಿದರು. ಗ್ರಾಮದಲ್ಲಿ ಶರಣ ಬಂಧುಗಳು ಶ್ರೀಮಂಟೇಸ್ವಾಮಿ ಹೆಸರಿನಲ್ಲಿ ಸೇವಾ ಟ್ರಸ್ಟ್ ರಚನೆ ಮಾಡಿರುವುದು ಸ್ವಾಗತಾರ್ಹ. ಮಂಟೇಸ್ವಾಮಿಯವರು ಧರ್ಮ ಬೋಧನೆಯ ಜತೆಗೆ ಪವಾಡ ಹಾಗೂ ಮೌಢ್ಯಗಳ ವಿರುದ್ಧ ಜಾಗೃತಿ ಮೂಡಿಸಿದ್ದರು ಎಂದು ಹೇಳಿದರು.

ನಗರದ ಶ್ರೀಸಿದ್ದಮಲ್ಲೇಶ್ವರಸ್ವಾಮಿ ವಿರಕ್ತ ಮಠದ ಚನ್ನಬಸವ ಸ್ವಾಮೀಜಿ ಮಾತನಾಡಿ, ಶ್ರೀಮಂಟೇಸ್ವಾಮಿ ಸೇವಾ ಟ್ರಸ್ಟ್ ಗ್ರಾಮದ ಅಭಿವೃದ್ಧಿಗೆ ಪೂರಕವಾಗಿ ಶ್ರಮಿಸುವಂತಾಗಲಿ. ಅಂತಹ ಮಹಾಪುರುಷರ ಹೆಸರಿನಲ್ಲಿ ಪ್ರಾರಂಭವಾಗಿರುವ ಟ್ರಸ್ಟ್ ಅವರ ಆಶಯಗಳಂತೆ ಸಾಗಲಿ ಎಂದರು.

ಟ್ರಸ್ಟ್‌ನ ಸಂತೋಷ ಕುಮಾರ್, ನಿವೃತ್ತ ಪ್ರಾಧ್ಯಾಪಕ ಪ್ರೊ.ಮಲ್ಲೇಶ್, ಪ್ರೊ.ಕೆ.ಸಿ.ಪರಮಶಿವಯ್ಯ ಮಾತನಾಡಿದರು. ಈ ಸಂದರ್ಭದಲ್ಲಿ ಟ್ರಸ್ಟ್ ಗೌರವಾಧ್ಯಕ್ಷ ಎಸ್.ಕುಮಾರ್, ಅಧ್ಯಕ್ಷ ಕೆ.ವಿ.ನಾಗರಾಜು, ನಗರಸಭಾ ಸದಸ್ಯ ಮನೋಜ್ ಪಟೇಲ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್, ಗೌಡಿಕೆ ಎಸ್.ಲಿಂಗಣ್ಣ, ಕೆ.ಎನ್.ಶಿವಕುಮಾರ್, ಗುರುಸ್ವಾಮಿ, ಚಿನ್ನಸ್ವಾಮಿ, ರಜನಿಕಾಂತ್ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net