

ಕೊಡೇಕಲ್: ನಾರಾಯಣಪುರದ ಬಸವಸಾಗರ ಭರ್ತಿಗೆ ಕ್ಷಣಗಣನೆ ಆರಂಭವಾಗಿದ್ದು ಮಂಗಳವಾರ ಬೆಳಗ್ಗೆಯಿಂದ ಜಲಾಶಯಕ್ಕೆ ೪೦ ಸಾವಿರ ಕ್ಯೂಸೆಕ್ ಪ್ರಮಾಣ ನೀರಿನ ಒಳಹರಿವು ದಾಖಲಾಗಿದೆ.
ಈಗಾಗಲೇ ಆಲಮಟ್ಟಿ ಜಲಾಶಯದಿಂದ ಐದು ದಿನಗಳಿಂದ ಕೃಷ್ಣಾ ನದಿಗೆ ನೀರು ಹರಿಸುತ್ತಿರುವ ಕಾರಣದಿಂದ ಬಸವಸಾಗರ ಜಲಾಶಯದ ನೀರಿನ ಒಳಹರಿವು ಹೆಚ್ಚಾಗಿದೆ. ೧೩೮೯.೭೮ ಕ್ಯೂಸೆಕ್‌ನಿಂದ ಗರಿಷ್ಠ ೩೩.೩೧೩ ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಈಗ ೨೫.೨೪೦ ಟಿಎಂಸಿ ನೀರು ಸಂಗ್ರಹವಾಗಿದೆ. ಗರಿಷ್ಠ ೪೯೨.೨೫೨ ಮೀ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ ೪೯೦.೩೩ ಮೀ ನೀರು ಸಂಗ್ರಹವಾಗಿದೆ. ಜಲಾಶಯ ಭರ್ತಿಗೆ ಇನ್ನೂ ಕೇವಲ ೧.೯೨೨ ಮೀ ಅಷ್ಟೆ ಬಾಕಿ ಉಳಿಸಿದ್ದು, ಶೇ.೭೫ ಜಲಾಶಯ ಭರ್ತಿಯಾಗಿದೆ.ಬಸವಸಾಗರ ಜಲಾಶಯಕ್ಕೆ ದಿನದಿಂದ ದಿನಕ್ಕೆ ಒಳಹರಿವು ಹೆಚ್ಚಾಗಿದ್ದು, ಯಾವುದೇ ಸಮಯದಲ್ಲಿ ಕೃಷ್ಣಾ ನದಿಗೆ ನೀರು ಹರಿಸಲಾಗುವುದು. ಹೀಗಾಗಿ ನದಿ ಪಾತ್ರದ ಪ್ರದೇಶದ ರೈತರು, ತಮ್ಮ ದನ-ಕರು ಹಾಗೂ ಪಂಪ್‌ಸೆಟ್‌ಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು. ನದಿ ತೀರದಲ್ಲಿ ಯಾವುದೇ ಚಟುವಟಿಕೆ ನಡೆಸಬಾರದು.