ಬಸವಸಾಗರಕ್ಕೆ ಹರಿದುಬಂದ ಮುಂಗಾರು ನೀರು

23-07kodekal02
೫೦೮೧ ಕ್ಯೂಸೆಕ್ ನೀರಿನ ಒಳಹರಿವಿನಿಂದ ತುಂಬುತ್ತಿರುವ ನಾರಾಯಣಪುರದ ಬಸವಸಾಗರ ಜಲಾಶಯ.
Published on

ಕೊಡೇಕಲ್: ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ವ್ಯಾಪಕ ಮಳೆಯಿಂದಾಗಿ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಜೀವಕಳೆ ಬರುವ ಲಕ್ಷಣ ಗೋಚರಿಸಿದೆ. ಮುಂಗಾರಿನಲ್ಲಿ ಮೊದಲ ಬಾರಿಗೆ ೫೦೮೧ ಕ್ಯೂಸೆಕ್ ಒಳಹರಿವಿನಿಂದಾಗಿ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

ಬರಗಾಲದ ಹೊರತಾಗಿಯೂ ಇನ್ನುಳಿದ ವರ್ಷಗಳ ಜೂನ್‌ನಲ್ಲಿ ತುಂಬಿ ತುಳುಕುತ್ತಿದ್ದ ಬಸವಸಾಗರ ಮುಂಗಾರು ಅಭಾವದಿಂದ ಡೆಡ್ ಸ್ಟೋರೆಜ್ ಹಂತಕ್ಕೆ ತಲುಪಿತ್ತು. ಒಂದೆಡೆ ಮಳೆಯಾಗದೆ ಬೆಳೆಗಳು ಒಣಗುತ್ತ ಸಾಗಿದ್ದರೆ, ಇನ್ನೊಂದೆಡೆ ಜಲಾಶಯ ಬರಿದಾಗುತ್ತಿರುವುದನ್ನು ಕಂಡು ಅನ್ನದಾತರ ಮುಖಗಳು ಬಾಡಿ ಹೋಗಿದ್ದವು. ಸದ್ಯ ಜಲಾಶಯಕ್ಕೆ ಸ್ವಲ್ಪ ಪ್ರಮಾಣದಲ್ಲಾದರೂ ನೀರಿನ ಒಳಹರಿವಿನಿಂದ ಮುಖ ಹೂವಿನಂತೆ ಅರಳುತ್ತಿದೆ.

ಮಹಾರಾಷ್ಟ್ರದ ಕೃಷ್ಣಾ ಕಣಿವೆ ಪ್ರದೇಶಗಳಲ್ಲಿ ವ್ಯಾಪಕ ಮಳೆಯಿಂದಾಗಿ ನದಿಗೆ ನೀರು ಹರಿದು ಬರುತ್ತಿದ್ದು, ಭಾನುವಾರ ಆಲಮಟ್ಟಿ ಜಲಾಶಯಕ್ಕೆ ೧೦೭೭೬೯ ಕ್ಯೂಸೆಕ್ ಒಳಹರಿವು ಇದ್ದು, ನದಿಗೆ ೬ ಸಾವಿರ ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಇದರಿಂದ ಬಸವಸಾಗರಕ್ಕೆ ೫೦೮೧ ಕ್ಯೂಸೆಕ್ ಒಳಹರಿವು ಇರುವುದು ಸಮಾಧಾನ ತಂದಿದೆ.


ಈ ಬಾರಿ ಮಳೆ ಕೊರತೆಯಿಂದ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ ಒಂದು ವಾರದಿಂದ ಮಳೆಯಾಗುತ್ತಿರುವುದು ಸಂತೋಷ ಮೂಡಿಸಿದ್ದರೆ, ಆಲಮಟ್ಟಿ ಮತ್ತು ಬಸವಸಾಗರ ಜಲಾಶಯಕ್ಕೆ ನೀರಿನ ಒಳಹರಿವು ಖುಷಿ ತಂದಿದೆ. ದೇವರ ಕೃಪೆಯಿಂದ ಹೆಚ್ಚಿನ ಮಳೆಯಾಗುವ ಮೂಲಕ ಎರಡೂ ಜಲಾಶಯಗಳು ಭರ್ತಿಯಾಗಲಿ.
| ಮಲ್ಲನಗೌಡ ಹಗರಟಗಿ
ಜಿಲ್ಲಾಧ್ಯಕ್ಷ, ರೈತ ಸಂಘ ಹಸಿರು ಸೇನೆ (ವಾಸುದೇವ ಮೇಟಿ ಬಣ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net