

ಕೊಡೇಕಲ್: ಮಹಾರಾಷ್ಟç ಮತ್ತು ಕೃಷ್ಣಾ ನದಿ ಮೇಲ್ಭಾಗದಲ್ಲಿ ಸುರಿಯುತ್ತಿರುವ ಮಳೆಯ ಪರಿಣಾಮ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಸೋಮವಾರ ನೀರಿನ ಒಳಹರಿವು ಗಣನೀಯವಾಗಿ ಹೆಚ್ಚಾಗಿದ್ದು, ಇದರಿಂದಾಗಿ ಜಲಾಶಯದ ೨೨ ಮುಖ್ಯಕ್ರಸ್ಟ್ ಗೇಟುಗಳ ಮೂಲಕ ೫೯೧೮೦ ಕ್ಯೂಸೆಕ್ ಪ್ರಮಾಣದ ನೀರು ಮತ್ತು ಎಂಪಿಸಿಎಲ್ ಮೂಲಕ ೬ ಸಾವಿರ ಕ್ಯೂಸೆಕ್ ನೀರು ಒಟ್ಟು ೬೫೧೮೦ ಕ್ಯೂಸೆಕ್ ಪ್ರಮಾಣದ ನೀರನ್ನು ಕೃಷ್ಣಾ ನದಿಗೆ ಹರಿಸಲಾಗುತ್ತಿದ್ದು, ನದಿ ತೀರದ ಗ್ರಾಮಗಳಿಗೆ ಪ್ರವಾಹದ ಭೀತಿ ಎದುರಾಗುವ ಸಾಧ್ಯತೆ ಇರುವುದರಿಂದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ.
೪೯೦.೨೫೨ ಮೀ ಗರಿಷ್ಠ ನೀರು ಸಂಗ್ರಹದ ಜಲಾಶಯ ೪೯೦.೬೭ ಮೀಗೆ ತಲುಪಿದ್ದು ೩೩.೩೧೩ ಟಿಎಂಸಿ ಗರಿಷ್ಟ ನೀರು ಸಂಗ್ರಹ ಸಾಮರ್ಥ್ಯವುಳ್ಳ ಬಸವಸಾಗರದಲ್ಲಿ ಸದ್ಯ ೨೬.೫೪ ಟಿಟಂಸಿ ನೀರು ಸಂಗ್ರಹವಾಗಿದ್ದು ಜಲಾಶಯ ಶೇ.೭೯.೬೮ ಭರ್ತಿಯಾಗಿದ್ದು ನೀರಿನ ಸಂಗ್ರಹ ಮಟ್ಟವನ್ನು ಕಾಯ್ದುಕೊಂಡು ಗೇಟುಗಳ ಮೂಲಕ ಹಾಗೂ ಎಂಪಿಸಿಎಲ್ ಮೂಲಕ ನದಿಗೆ ನೀರು ಹರಿಸಲಾಗುತ್ತಿದೆ.
ಇದರಿಂದ ಮೇಲಿನಗಡ್ಡಿ, ದೇವರಗಡ್ಡಿ, ಬೆಂಚಿಗಡ್ಡಿ, ನೀಲಕಂಠರಾಯನಗಡ್ಡಿ, ತಿಂಥಣಿ, ಬಂಡೊಳ್ಳಿ, ಶೆಳ್ಳಗಿ, ಚೌಡೇಶ್ವರಿಹಾಳ ಸೇರಿ ಇತರೆ ನದಿ ತೀರದ ಗ್ರಾಮಗಳ ಜನರು ನದಿ ಸಮೀಪ ತೆರಳದಂತೆ ಮತ್ತು ಜಾನುವಾರುಗಳನ್ನು ನದಿ ಪಾತ್ರಕ್ಕೆ ಬಿಡದಂತೆ ಎಚ್ಚರಿಕೆ ವಹಿಸಬೇಕು. ಅಲ್ಲದೆ ಮೀನುಗಾರರು ನದಿಗೆ ಇಳಿಯದಂತೆ ಕಟ್ಟೆಚ್ಚರ ವಹಿಸಬೇಕು ಎಂದು ಸೂಚನೆ ನೀಡಲಾಗಿದೆ. ಈ ಕುರಿತು ಗ್ರಾಪಂನವರು ನದಿ ತೀರದ ಗ್ರಾಮಗಳಲ್ಲಿ ಧ್ವನಿ ವರ್ಧಕಗಳಿಂದ, ಡಂಗೂರ ಸಾರುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.