

ಕೊಡೇಕಲ್: ರಾಜ್ಯದ ಮೂರನೇ ದೊಡ್ಡ ಅಣೆಕಟ್ಟು, ಕೃಷ್ಣೆಯನ್ನು ಒಡಲಲ್ಲಿ ಇಟ್ಟುಕೊಂಡು ಮೂರು ಜಿಲ್ಲೆ ಸೇರಿ ಸುಮಾರು ಆರು ಲಕ್ಷ ಹೆಕ್ಟೇರ್ ಭೂಪ್ರದೇಶಕ್ಕೆ ನೀರುಣಿಸುವ ಕೃಷ್ಣಾ ಭಾಗ್ಯ ಜಲನಿಗಮದ ಉದಯಕ್ಕೆ ಕಾರಣವಾದ ಬಸವಸಾಗರ ಜಲಾಶಯಕ್ಕೆ ಭಾನುವಾರ 42ನೇ ವರ್ಷದ ಸಂಭ್ರಮ.
ವಿಜಯಪುರ ಜಿಲ್ಲೆ ಮುz್ದೆÃಬಿಹಾಳ ತಾಲೂಕಿನ ಸಿದ್ದಾಪುರ ಗ್ರಾಮ ವ್ಯಾಪ್ತಿಯಲ್ಲಿ ಅಣೆಕಟ್ಟಿನ ಶಿಲಾನ್ಯಾಸವನ್ನು 1964ರ ಮೇ 22ರಂದು ಕೇಂದ್ರ ಮಂತ್ರಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತಿç ಮೈಸೂರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಎಸ್.ನಿಜಲಿಂಗಪ್ಪ ಜತೆ ನೆರವೇರಿಸಿದರು. 1969ರಲ್ಲಿ ಶುರುವಾದ ನಿರ್ಮಾಣ ಕೆಲಸ ಸುಮಾರು 15 ವರ್ಷದ ನಂತರ ಪೂರ್ಣಗೊಂಡ ಬಸವಸಾಗರ ಜಲಾಶಯವನ್ನು ಭಾರಿ ಮತ್ತು ಮಧ್ಯಮ ನೀರಾವರಿ ಯೋಜನೆಗಳ ರಾಜ್ಯ ಸಚಿವ ಬಿ.ವಿ. ಚಿಮ್ಮನಕಟ್ಟಿ ಅಧ್ಯಕ್ಷತೆಯಲ್ಲಿ ಮುಖ್ಯಮಂತ್ರಿ ಆರ್. ಗುಂಡೂರಾವ್ 1982ರ ಸೆ.22ರಂದು ಉದ್ಘಾಟಿಸಿ ರಾಷ್ಟçಕ್ಕೆ ಅರ್ಪಿಸಿದರು.
ಕೃಷ್ಣೆಗೆ ಅಡ್ಡಲಾಗಿ ಕಟ್ಟಿರುವ ಈ ಅಣೆಕಟ್ಟಿನ ಅಳತೆ 10.97 ಕಿಮೀ. ಫೌಂಡೇಷನ್ ಬೆಡ್‌ನಿಂದ 29.72 ಮೀ. ಎತ್ತರವಿದೆ. ತುಂಗಭದ್ರಾ ಸ್ಟೀಲ್ ಕಂಪನಿ ತಯಾರಿಸಿದ 39 ಮುಖ್ಯ ಗೇಟ್‌ಗಳಿರುವ ಅಣೆಕಟ್ಟಿನ 25 ಗೇಟ್ ವಿಜಯಪುರ ಜಿಲ್ಲೆ, 9 ಗೇಟ್ ಯಾದಗಿರಿ ಹಾಗೂ ಮೂರು ಗೇಟ್ ರಾಯಚೂರು ಜಿಲ್ಲೆ ವ್ಯಾಪ್ತಿಗೆ ಬರುತ್ತವೆ. ಉಳಿದೆರಡು ಎಮರ್ಜೆನ್ಸಿ ವೇಳೆ ನೀರು ಬಿಡಲು ಕಾದಿರಿಸಿದ್ದಾಗಿವೆ. 12*15 ಅಳತೆಯ 10.05 ಮೀಟರ್‌ನ 39 ಕ್ರಸ್ಟ್ ಗೇಟ್‌ಗಳಿಂದ 13.40 ಲಕ್ಷ ಕ್ಯೂಸೆಕ್ ನೀರು ನದಿಗೆ ಬಿಡಬಹುದಾಗಿದೆ. 33.313 ಟಿಎಂಸಿ ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 492.252 ಮೀಟರ್‌ವರೆಗೆ ಸಂಗ್ರಹಿಸಬಹುದು. ಇದುವರೆಗೆ ಮುಖ್ಯ ಕ್ರಸ್ಟ್ ಗೇಟ್‌ಗಳಿಂದ ಪ್ರವಾಹ ಪರಿಸ್ಥಿತಿಯಲ್ಲಿ 6.25 ಲಕ್ಷ ಕ್ಯೂಸೆಕ್ ನೀರು ಗರಿಷ್ಠ ಪ್ರಮಾಣದಲ್ಲಿ ನದಿಗೆ ಹರಿಬಿಡಲಾಗಿದೆ. ಡ್ರಿಪ್ ಯೋಜನೆಯಡಿ ನವೀಕರಣ ಹೊಂದಿರುವ ಜಲಾಶಯಕ್ಕೆ ಎಕ್ಸಲೆನ್ಸ್ ಅವಾರ್ಡ್ ಕೂಡ ದೊರೆತಿರುವುದು ವಿಶೇಷ.
ನೀರಾವರಿ ಯೋಜನೆ, ಕುಡಿಯಲು, ಔದ್ಯೋಗಿಕರಣ ಮತ್ತು ವಿದ್ಯುತ್ ಉತ್ಪಾದನೆ ಹೀಗೆ ನಾಲ್ಕು ಮುಖ್ಯ ಕಾರಣಗಳಿಗಾಗಿ ಜಲಾಶಯ ನೀರು ಬಳಸಲಾಗುತ್ತಿದೆ. ರಾಯಚೂರು, ಯಾದಗಿರಿ, ಕಲಬುರಗಿ, ವಿಜಯಪುರ, ಬಾಗಲಕೋಟೆ ಸೇರಿ 6 ಲಕ್ಷ ಹೆಕ್ಟೇರ್ ಭೂ ಪ್ರದೇಶ ನೀರಾವರಿ ಹೊಂದಿದೆ. ಇದರಲ್ಲಿ ಎರಡು ಬಹು ಮುಖ್ಯ ರಾಂಪುರ ಹಾಗೂ ರಾಜನಕೊಳುರ ಏತ ನೀರಾವರಿ ಯೋಜನೆ ಒಳಗೊಂಡಿದ್ದು, ಬೂದಿಹಾಳ-ಪೀರಾಪುರ ಹಾಗೂ ದೇವತ್ಕಲ್ ಏತನೀರಾವರಿ ಯೋಜನೆಗಳು ಅನುಷ್ಠಾನಗೊಂಡಿವೆ. ಇನ್ನು ಮುz್ದÉÃಬಿಹಾಳ, ಕುಷ್ಟಗಿ, ಇಳಕಲ್, ಹುನಗುಂದ, ನಾಲತವಾಡ ಮುಂತಾದ ನಗರಗಳಿಗೆ ಕುಡಿಯುವ ನೀರನ್ನು ಬಸವಸಾಗರ ಒದಗಿಸುತ್ತಿದೆ. ಶಕ್ತಿ ನಗರದ ಥರ್ಮಲ್ ಪವರ್ ಸೆಂಟರ್‌ಗೆ ನೀರು ಪೂರೈಸುವ ಈ ಅಣೆಕಟ್ಟಿನಿಂದ ಮೂರು ವಿದ್ಯುತ್ ಉತ್ಪಾದನಾ ಕೇಂದ್ರಗಳು ಜನ್ಮ ತಾಳಿವೆ. ಆರ್.ಎನ್.ಶೆಟ್ಟಿ, ಛಾಯಾ ದೇವಿ ಮತ್ತು ಭೋರುಕಾ ಪವರ್ ಪ್ಲಾಂಟ್ ಮತ್ತು ತನ್ನ ಕೆಳಗೆ ಅನೇಕ ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿರುವ ಕೃಷ್ಣೆಗೆ ಬಸವಸಾಗರ ಸಹಕಾರಿಯಾಗಿದೆ.
ಇಂತಹ ಅನೇಕ ಯೋಜನೆಗಳಿಗಾಗಿ ಕೃಷ್ಣೆಯನ್ನು ತಡೆದು ಬಸವಸಾಗರ ನಿರ್ಮಿಸಲು 77 ಗ್ರಾಮಗಳ 9625 ಮನೆಯ 48125 ಜನರು ತಮ್ಮ ಫಲವತ್ತಾದ ಭೂಮಿ ಬಿಟ್ಟು ಸ್ಥಳಾಂತರಗೊಳ್ಳಬೇಕಾಯಿತು. ಹೀಗೆ ರೈತರ ಜೀವನಾಡಿಯಾಗಿರುವ ಬಸವಸಾಗರ ಲೋಕಾರ್ಪಣೆಯಾಗಿ ಭಾನುವಾರ 42ನೇ ವರ್ಷದ ಸಂಭ್ರಮದಲ್ಲಿದೆ.