ಬಸವಮಾರ್ಗ ಮರೆತರೆ ಎಚ್ಚರಿಸಿ

55
Published on

ವಿಜಯವಾಣಿ ಸುದ್ದಿಜಾಲ ನೆಲಮಂಗಲ

ದಿಕ್ಕು ತಪ್ಪುತ್ತಿರುವ ಸಮಾಜಕ್ಕೆ ಬಸವಾದಿ ಶರಣರ ತತ್ವಾದರ್ಶಗಳು ಅನಿವಾರ್ಯವಿದೆ ಎಂದು ವನಕಲ್ಲು ಮಠದ ಶ್ರೀ ಬಸವ ರಮಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

ಬೆಂಗಳೂರು ಉತ್ತರ ತಾಲೂಕು ದಾಸನಪುರ ಹೋಬಳಿ ಹುಸ್ಕೂರು ಗ್ರಾಮದಲ್ಲಿ ಪವಾಡ ಶ್ರೀ ಬಸವಣ್ಣ ದೇವರ ಮಠ, ಬಸವ ಭಾರತ ಪ್ರತಿಷ್ಠಾನ, ಪವಾಡ ಶ್ರೀ ಧಾರ್ಮಿಕ, ಸಾಂಸ್ಕೃತಿಕ ಕೇಂದ್ರ, ವೀರಶೈವ ಲಿಂಗಾಯತ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘ, ಲಿಂಗಾಯಿತ ಮಹಾಸಭಾ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಬಸವ ಸಂಚಾರ (ದ್ವಿತೀಯ) ಕಾರ್ಯಕ್ರಮದಲ್ಲಿ ಮಾತನಾಡಿದರು.

12ನೇ ಶತಮಾನದ ಬಸವವಾದಿ ಪ್ರಮಥರ ವಚನ ಸಾಹಿತ್ಯದ ಸಾರಗಳಲ್ಲಿನ ಮಾನವೀಯ ಮೌಲ್ಯಗಳನ್ನು ಅಭಿವೃದ್ಧಿಶೀಲ ದೇಶಗಳೂ ಅರ್ಥ ಮಾಡಿಕೊಂಡಿವೆ. ಇಂಗ್ಲೆಂಡ್‌ನ ಪಾರ್ಲಿಮೆಂಟ್ ಭವನದ ಮುಂಭಾಗದಲ್ಲಿ ಬಸವಣ್ಣನ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಆದರೆ, ಆಧುನಿಕತೆಯ ಹೆಸರಿನಲ್ಲಿ ಬಸವ ಮಾರ್ಗವನ್ನು ಮರೆತಿರುವ ಸಮುದಾಯದ ಜನತೆಯನ್ನು ಎಚ್ಚರಿಸಿ, ಸನ್ಮಾರ್ಗದಲ್ಲಿ ಕೊಂಡೊಯ್ಯುವ ಉದ್ದೇಶದಿಂದ ಬಸವ ಸಂಚಾರ ಕಾರ್ಯಕ್ರಮ ಆರಂಭಿಸಿರುವುದು ಅರ್ಥಪೂರ್ಣವಾಗಿದೆ ಎಂದರು.

ದೊಡ್ಡಬೆಳವಂಗಲ ಖಾನಿಮಠದ ಶ್ರೀ ಬಸವರಾಜ ಸ್ವಾಮೀಜಿ ಮಾತನಾಡಿ, ಲಿಂಗಾಯತ ಧರ್ಮದ ಸಂಸ್ಕೃತಿ, ಆಚಾರ, ವಿಚಾರಗಳು ವಿಶೇಷ ಹಾಗೂ ಮಾದರಿಯಾಗಿವೆ. ವೃದ್ಧಾಪ್ಯದಲ್ಲಿ ದೇವರನ್ನು ಪೂಜಿಸಲು ಹೋಗದೆ ನಿತ್ಯ ಇಷ್ಟಲಿಂಗ ಪೂಜೆಯಂತಹ ಸದಾಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬಹುದಾಗಿದೆ ಎಂದರು. ಪವಾಡ ಶ್ರೀ ಬಸವಣ್ಣ ದೇವರಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಕಾಲ ಬದಲಾದಂತೆ ಸಮಾಜದಲ್ಲಿ ಲಿಂಗಾಯತ ಧರ್ಮ, ಸಂಸ್ಕೃತಿ ಕುರಿತಾದ ಪ್ರಜ್ಞೆ, ಅರಿವು ಕಡಿಮೆಯಾಗುತ್ತಿದೆ. ಲಿಂಗಾಯತ ಸಂಸ್ಕೃತಿಯನ್ನು ಭವಿಷ್ಯದ ಯುವಪೀಳಿಗೆಗೆ ಅರ್ಥ ಮಾಡಿಸುವುದು, ಸಂಸ್ಕಾರಯುತ ಸಮಾಜ ನಿರ್ಮಾಣ ಮಾಡುವ ಉದ್ದೇಶದಿಂದ ಕಾರ್ಯಕ್ರಮ ಆರಂಭಿಸಲಾಗಿದೆ ಎಂದು ತಿಳಿಸಿದರು. ಗ್ರಾಮದ ಹಿರಿಯ ಮುಖಂಡರನ್ನು ಸನ್ಮಾನಿಸಲಾಯಿತು.

ಹುಸ್ಕೂರು ಗ್ರಾಮ ಪಂಚಾಯಿತಿ ಸದಸ್ಯ ವೀರಪ್ಪದೇವ್ರ, ಮಾಜಿ ಸದಸ್ಯ ಸದಾಶಿವಯ್ಯ, ಹಿರಿಯ ಮುಖಂಡರಾದ ಬಸವರಾಜು, ಪ್ರಕಾಶ್, ಜಯಣ್ಣ, ವೀರಪ್ಪ, ಎಚ್.ಕೆ.ವೀರಪ್ಪದೇವ್ರ ಮತ್ತಿತರರು ಇದ್ದರು.

ಮನೆಮನೆಗೆ ಭಾವಚಿತ್ರ ವಿತರಣೆ: ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ನೂರಕ್ಕೂ ಹೆಚ್ಚು ಮನೆಗಳಿಗೆ ತೆರಳಿದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹಾಗೂ ಬಸವ ಸಂಚಾರದ ತಂಡ ಶರಣೆ ನೀಲಾಂಬಿಕೆ, ಚೆನ್ನಬಸವಣ್ಣ ಅವರ ಭಾವಚಿತ್ರಗಳನ್ನು ವಿತರಿಸಿದರು.

ಬಸವ ಸಂಚಾರಕ್ಕೆ ಮೊದಲಿಗೆ ತಾಲೂಕಿನ ದಾಬಸಪೇಟೆ ಹೋಬಳಿ ದಾಸೇನಹಳ್ಳಿಯಲ್ಲಿ ಚಾಲನೆ ದೊರೆತಿದೆ. 2ನೇ ಕಾರ್ಯಕ್ರಮ ಹುಸ್ಕೂರಲ್ಲಿ ಆಯೋಜಿಸಲಾಗಿದೆ. ಬಸವ ಸಂಚಾರ ಕುರಿತು ಸಮುದಾಯದಿಂದ ಒಳ್ಳೆಯ ಸ್ಪಂದನೆ ದೊರೆತಿದೆ ನಾಗರಾಜು ಅಧ್ಯಕ್ಷ, ವೀರಶೈವ ಲಿಂಗಾಯತ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net