

ಮಧುಗಿರಿ: ತಾಲೂಕಿನ ಬಸವನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ 2024-&25 ನೇ ಸಾಲಿನ ಅತ್ಯುತ್ತಮ ಎಸ್ಡಿಎಂಸಿ ಪ್ರಶಸ್ತಿಗೆ ಭಾಜನವಾಗಿದ್ದು, ತಾಲೂಕಿನ ಹೆಮ್ಮೆ ಎನಿಸಿದೆ. ರಾಜ್ಯ ಸರ್ಕಾರದ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ 2024-&25ನೇ ಸಾಲಿನಲ್ಲಿ ಪುಷ್ಠಿ ಕಾರ್ಯಕ್ರಮದಡಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಶಾಲೆಗಳಿಗೆ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಈ ಪ್ರಶಸ್ತಿ ನೀಡಲಿದೆ. ಶಾಲೆಯಲ್ಲಿ 1ರಿಂದ 5ನೇ ತರಗತಿಯವರೆಗೆ 46 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, 2 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳ ಶಿಕ್ಷಣದ ಗುಣಮಟ್ಟ, ಅಭಿವೃದ್ಧಿಗೆ ಉತ್ತಮವಾಗಿ ಕಾರ್ಯನಿರ್ವಹಿಸುವ ಎಸ್ಡಿಎಂಸಿ ಸಮಿತಿಗಳನ್ನು ಗುರುತಿಸುವುದು, ಸಮಿತಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವುದು, ಉತ್ತಮ ಶಾಲೆ ಹೇಗಿರುತ್ತದೆ ಎಂಬುದರ ಅರಿವು ಮೂಡಿಸಿ ಸದಸ್ಯರ ಸಾಮರ್ಥ್ಯ ವೃದ್ಧಿಸುವುದು, ವಿವಿಧ ಶಾಲೆಗಳ ಎಸ್ಡಿಎಂಸಿಗಳ ನಡುವೆ ಆರೋಗ್ಯಕರ ಸ್ಪರ್ಧೆ ಏರ್ಪಡಿಸುವ, ಉತ್ತೇಜಿಸುವ ನಿಟ್ಟಿನಲ್ಲಿ ಸರ್ಕಾರಿ ಶಾಲೆ ಮತ್ತು ಎಸ್ಡಿಎಂಸಿಗಳನ್ನು ಪ್ರೋತ್ಸಾಹಿಸಲು ಬ್ಲಾಕ್ಮಟ್ಟದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಶಾಲೆಗಳಿಗೆ ಪ್ರಶಸ್ತಿ ನೀಡಲಾಗುತ್ತದೆ. ಅದಕ್ಕಾಗಿ ರಾಜ್ಯದ ಎಲ್ಲ ಸರ್ಕಾರಿ ಸ್ವಾಮ್ಯದ ಶಾಲೆಗಳು, ವಿದ್ಯಾವಾಹಿನಿ ಪೋರ್ಟಲ್ನಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸಮೀಕ್ಷೆಗೆ ಪಾಲ್ಗೊಳ್ಳುವ ಮೂಲಕ ಪ್ರಶಸ್ತಿ ಪಡೆಯಲು ಅವಕಾಶ ನೀಡಲಾಗಿತ್ತು.
ಎಲ್ಲರಿಗೂ ಮಾದರಿ ಶಾಲೆ: ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಹೆಮ್ಮೆಯ ಬಸವನಹಳ್ಳಿ ಶಾಲೆ ಎಸ್ಡಿಎಂಸಿ ಹಾಗೂ ಶಿಕ್ಷಕರ ಸಾಧನೆಗೆ ಹಿಡಿದ ಕನ್ನಡಿಯಂತೆ ಹೆಸರುವಾಸಿಯಾಗಿದೆ. ಶಾಲೆಯಲ್ಲಿ ಮಕ್ಕಳ ಕಲಿಕೆ ಜತೆಗೆ ಸ್ವಚ್ಛತೆಗೆ ಹೆಚ್ಚು ಒತ್ತು ನೀಡಲಾಗಿದೆ. ಶಾಲೆಯ ಗೋಡೆಗಳ ಮೇಲೆ ಬಿಡಿಸಿರುವ ರಾಯದುರ್ಗ &-ತುಮಕೂರು ರೈಲಿನ ಚಿತ್ತಾರ ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ದೂರದಿಂದ ಬರುವ ವಾಹನ ಸವಾರರಿಗೆ ರೈಲು ಬರುತ್ತಿದೆ ಎಂಬಂತೆ ಭಾಸವಾಗುತ್ತದೆ. ಇದರ ಜತೆಗೆ ಶಾಲೆಯಲ್ಲಿ ಕೈದೋಟ, ಮಕ್ಕಳಿಂದ ಪಾಲಕರಿಗೆ ಪಾದಪೂಜೆ ಮಾಡಿಸುವ ಮೂಲಕ ಮಕ್ಕಳಲ್ಲಿ ಸಂಸ್ಕಾರ ರೂಢಿಸಲಾಗುತ್ತಿದೆ. ಇವುಗಳಲ್ಲದೇ ಶಾಲೆಯ ಶಿಕ್ಷಕ ಎಸ್.ವಿ.ರಮೇಶ್ಗೆ 2024-&25 ನೇ ಸಾಲಿನ ರಾಜ್ಯ ಪ್ರಶಸ್ತಿ ವಿಜೇತರಾಗಿರುವುದು ಮತ್ತೊಂದು ಹೆಮ್ಮೆ. ಹಸಿರು ಶಾಲೆ ಪ್ರಶಸ್ತಿ, ಆದರ್ಶ ಶಾಲೆ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗೆ ಶಾಲೆ ಭಾಜನವಾಗಿದೆ.
1 ಲಕ್ಷ ರೂಪಾಯಿ ಪ್ರೋತ್ಸಾಹ ಧನ: ಆಯ್ಕೆಯಾದ ಶಾಲಾಭಿವೃದ್ಧಿ ಮತ್ತು ಮೇಲುಸ್ತಾವಾರಿ ಸಮಿತಿ ಶಾಲೆಗಳಿಗೆ ಪ್ರಶಸ್ತಿ ಜತೆಗೆ 1 ಲಕ್ಷ ರೂ. ಪ್ರೋತ್ಸಾಹಧನವನ್ನೂ ನೀಡಲಾಗುತ್ತದೆ. ಈ ಹಣವನ್ನು ಶಾಲೆಯ ಸೌಕರ್ಯ ಗ್ರಂಥಾಲಯ, ಗಣಕಯಂತ್ರ ಸ್ಮಾರ್ಟ್ ಬೋರ್ಡ್, ವಿಷಯಾಧಾರಿತ, ಅನಿಮೇಟೆಡ್ ವಿಡಿಯೋ, ಕ್ರೀಡಾ ಸಾಮಗ್ರಿ, ಪ್ರಯೋಗಾಲಯ, ಕಲಿಕಾ ಮೇಳ, ಉದ್ಯೋಗ ಮೇಳ, ಅಂತರ್ಜಾಲ ಸೌಲಭ್ಯ, ಯುಪಿಎಸ್, ಸಿ.ಸಿ ಕ್ಯಾಮರಾ ಮತ್ತು ಮಕ್ಕಳ ಸೃಜನ ಶೀಲತೆಯನ್ನು ಹೆಚ್ಚಿಸುವ ಚಟುವಟಿಕೆಗಳು ಸೇರಿದಂತೆ ಶಾಲಾ ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ಮೇರೆಗೆ ಬಳಿಸಿಕೊಳ್ಳಬಹುದು. ಈ ಬಗ್ಗೆ ಎಸ್ಡಿಎಂಸಿ ಸಭೆ ನಡೆಸಿ ರ್ನಿಣಯ ಕೈಗೊಂಡು ಕ್ರಿಯಾಯೋಜನೆಯನ್ನು ಸಿದ್ಧಪಡಿಸಿ, ಕ್ಷೇತ್ರಶಿಕ್ಷಣಾಧಿಕಾರಿಗಳಿಂದ ಅನುಮೋದನೆ ಪಡೆದು ನಿಯಾಮಾನುಸಾರ ಖರ್ಚು ಮಾಡಲು ಅವಕಾಶ ಇದೆ.
ಆಯ್ಕೆ ಹೇಗೆ..?: ವಿದ್ಯಾವಾಹಿನಿ ಪೋರ್ಟಲ್ನಲ್ಲಿ 44,762 ಶಾಲೆಗಳು ಈ ಬಾರಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸಮೀಕ್ಷೆಗೆ ಪಾಲ್ಗೊಳ್ಳುವ ಮೂಲಕ ಕ್ಲಸ್ಟರ್ ಹಂತದಿಂದ ತಾಲೂಕು ಹಂತಕ್ಕೆ 1,836 ಶಾಲೆಗಳು ಹಾಗೂ ತಾಲೂಕು ಹಂತದಿಂದ 6,12 ಶಾಲೆಗಳು ಜಿಲ್ಲಾ ಹಂತದವರೆಗಿನ ಮೌಲ್ಯಮಾಪನದಲ್ಲಿ ತೊಡಗಿಸಿಕೊಂಡಿದ್ದವು. ಇದರಲ್ಲಿ ಅಂತಿಮವಾಗಿ 204 ಶಾಲೆಗಳು (ಪ್ರತಿ ತಾಲೂಕಿನಿಂದ ಒಂದರಂತೆ) ವಿದ್ಯಾವಾಹಿನಿ ಪೋರ್ಟಲ್ನ ಮೂಲಕ ಆಯ್ಕೆಗೊಂಡಿದ್ದು, ಅದರಂತೆ ಬಸವನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಅಂತಿಮವಾಗಿ ಆಯ್ಕೆಗೊಂಡಿದೆ. ಬಸವನಹಳ್ಳಿ ಶಾಲೆ ಪ್ರಶಸ್ತಿಗೆ ಭಾಜನವಾಗಿರುವುದು ತಾಲೂಕಲ್ಲದೆ ಜಿಲ್ಲೆಗೆ ಹೆಮ್ಮೆ ಎನಿಸಿದೆ.
ಮಕ್ಕಳ ಕಲಿಕೆಯ ದೃಷ್ಟಿಯಿಂದ ಬಸವನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಮತ್ತು ಎಸ್ಡಿಎಂಸಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಶಾಲೆಯ ಶಿಕ್ಷಕ ಎಸ್.ವಿ.ರಮೇಶ್ ಅವರಿಗೆ ಈಗಾಗಲೇ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಒಲಿದುಬಂದಿದೆ. ಶಾಲೆಯಲ್ಲಿ ಮಕ್ಕಳಿಗೆ ಉತ್ತಮ ಕಲಿಕಾ ವಾತಾವರಣ ನಿರ್ಮಿಸಲಾಗಿದೆ. ಹಾಗಾಗಿ ಈ ಬಾರಿಯ ಅತ್ಯುತ್ತಮ ಎಸ್ಡಿಎಂಸಿ ಪ್ರಶಸ್ತಿಗೆ ಶಾಲೆ ಪಾತ್ರವಾಗಿದೆ.
| ಕೆ.ಎನ್.ಹನುಮಂತರಾಯಪ್ಪ ಬಿಇಒ, ಮಧುಗಿರಿ
ಕ್ಷೇತ್ರದ ಜನಪ್ರತಿನಿಧಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಹಳೇ ವಿದ್ಯಾರ್ಥಿಗಳು, ಗ್ರಾಮದವರು ಮತ್ತು ಶಾಲೆಯ ಎಸ್ಡಿಎಂಸಿ ಸಮಿತಿಯ ನೆರವಿನಿಂದಾಗಿ ಶಾಲೆಗೆ ಅಗತ್ಯವಿರುವ ಎಲ್ಲ ಸೌಕರ್ಯಗಳನ್ನೂ ಒದಗಿಸಲಾಗಿದ್ದು, ಮಕ್ಕಳ ಕಲಿಕೆಗೆ ಒತ್ತು ನೀಡಲಾಗಿದೆ. ಈ ಬಾರಿಯ ಎಸ್ಡಿಎಂಸಿ ಪ್ರಶಸ್ತಿ ನಮ್ಮ ಶಾಲೆಗೆ ಒಲಿದು ಬಂದಿದ್ದು, ಇನ್ನೂ ಹೆಚ್ಚಿನ ಸಾಧನೆ ಮಾಡಲು ಸ್ಫೂರ್ತಿ ನೀಡಿದೆ.
| ಎಸ್.ವಿ.ರಮೇಶ್ ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ, ಬಸವನಹಳ್ಳಿ ಸರ್ಕಾರಿ ಶಾಲೆ