

ಕುಶಾಲನಗರ: ಬಸವನಹಳ್ಳಿ ಗಿರಿಜನ ವಿವಿಧೋದ್ದೇಶ ಸಹಕಾರ ಸಂಘ(ಲ್ಯಾಂಪ್ಸ್)ದ ಎರಡನೇ ಅವಧಿಗೆ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅರುಣ್‌ರಾವ್ ಆಯ್ಕೆಗೊಂಡಿದ್ದಾರೆ.
ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಸೋಮವಾರ ಸಂಘದ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಆಡಳಿತ ಮಂಡಳಿಯ 11 ಮತಗಳ ಪೈಕಿ ಅರುಣ್‌ರಾವ್ 7, ಬಿಜೆಪಿ ಬೆಂಬಲಿತ ಸುರೇಶ್ 4 ಮತ ಪಡೆದರು. ಅರುಣ್ ರಾವ್ 19 ತಿಂಗಳ ಅವಧಿಗೆ ಅಧ್ಯಕ್ಷರಾಗಿರಲಿದ್ದಾರೆ.
ವಿಧಾನಸಭಾ ಚುನಾವಣೆ ಬಳಿಕ ಈ ಭಾಗದಲ್ಲಿ ನಡೆದ ಪ್ರಥಮ ಚುನಾವಣೆ ಇದು. ಶಾಸಕರು, ಕಾಂಗ್ರೆಸ್ ಮುಖಂಡರ ಶ್ರಮದಿಂದ ಅರುಣ್ ರಾವ್ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಬಹುಮತವಿದ್ದ ಈ ಸಂಘದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿರುವುದು ಬಿಜೆಪಿ ಪತನದ ಹಾದಿಯಲ್ಲಿ ಇರುವುದನ್ನು ಸ್ಪಷ್ಟಪಡಿಸುತ್ತಿದೆ. ಮುಂದಿನ ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್‌ನ ವಿಜಯದ ನಾಗಾಲೋಟ ಮುಂದುವರಿಯಲಿದೆ ಎಂದು ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ವಿಶ್ವಾಸವ್ಯಕ್ತಪಡಿಸಿದರು.
ನೂತನ ಅಧ್ಯಕ್ಷ ಅರುಣ್ ರಾವ್ ಮಾತನಾಡಿ, ಇರುವ ಅಲ್ಪ ಅವಧಿಯಲ್ಲಿ ಸಂಘವನ್ನು ಮತ್ತಷ್ಟು ಅಭಿವೃದ್ಧಿ ಪಥದಲ್ಲಿ ತೆಗೆದುಕೊಂಡು ಹೋಗುವ ಗುರಿ ಇದೆ. ಅಂದಾಜು 7.5 ಕೋಟಿ ರೂ. ವೆಚ್ಚದಲ್ಲಿ ಜವಳಿ ಉದ್ಯಮ ಸ್ಥಾಪಿಸಿ ಕನಿಷ್ಠ 200 ಕುರುಬ ಮಹಿಳೆಯರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ನನ್ನ ತಂದೆ ರಾಜಾರಾವ್ ಸಾಕಷ್ಟು ಶ್ರಮಿಸಿದರು. ಅದರ ಮುಂದುವರಿದ ಭಾಗವನ್ನು ಕೈಗೆತ್ತಿಕೊಂಡು ಆ ಯೋಜನೆ ಪೂರ್ಣಗೊಳಿಸಲು ಎಲ್ಲ ಹಿರಿಯರ ಮಾರ್ಗದರ್ಶನ ಮತ್ತು ಸಹಕಾರ ಪಡೆದು ಯಶಸ್ವಿಯಾಗುತ್ತೇವೆ ಎಂದು ತಿಳಿಸಿದರು.
ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಕಚೇಯಲ್ಲಿ ವಿಜಯೋತ್ಸವ ಆಚರಿಸಲಾಯಿತು. ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಅವರನ್ನು ಲ್ಯಾಂಪ್ ಸೊಸೈಟಿ ನಿರ್ದೇಶಕರು ಅಭಿನಂದಿಸಿದರು.
ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಟಿ.ಪಿ.ಹಮೀದ್, ಲ್ಯಾಂಪ್ ನಿರ್ದೇಶಕರಾದ ಉದಯಕುಮಾರ್, ಮಾಜಿ ನಿರ್ದೇಶಕ ಕಾಳಿಂಗ, ಗಿರಿಜನ ಮುಖಂಡರಾದ ಪ್ರಕಾಶ್, ಸ್ವಾಮಿಯಪ್ಪ, ಮಂಜು, ಕೂಡಿಗೆ ಗ್ರಾಪಂ ಸದಸ್ಯ ಅನಂತ್, ಶಿವಕುಮಾರ್, ಮಾಜಿ ಸದಸ್ಯ ಕೃಷ್ಣ, ಮದಲಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸುನಿಲ್ ರಾವ್, ಕಾಂಗ್ರೆಸ್ ಕಿಸಾನ್ ಘಟಕದ ನವೀನ್ ಗೌಡ, ಪ್ರಮುಖರಾದ ಅರುಣ್ ಮಾದಪ್ಪ ಇತರರು ಇದ್ದರು.