

ಬಸವನಬಾಗೇವಾಡಿ: ಕರ್ನಾಟಕ, ಮಹಾರಾಷ್ಟ್ರ, ಸೀಮಾಂದ್ರ, ತೆಲಂಗಾಣ, ತಮಿಳುನಾಡು ಸೇರಿ ವಿವಿಧೆಡೆಯಿಂದ ಆಗಮಿಸಿದ್ದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಬಸವೇಶ್ವರ (ಮೂಲನಂದೀಶ್ವರ) ಬೆಳ್ಳಿ ಪಲ್ಲಕ್ಕಿ ಉತ್ಸವಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ಜಾತ್ರೆ ಅಂಗವಾಗಿ ರಾಜ್ಯದ ಬೀದರ್, ಕಲಬುರಗಿ, ರಾಯಚೂರು, ಕೊಪ್ಪಳ, ದಾವಣಗೇರೆ, ಹಾವೇರಿ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಬಾಗಲಕೋಟೆ ಸೇರಿ ಇತರರ ಜಿಲ್ಲೆಗಳ ಜನರು ಪಾಲ್ಗೊಂಡಿದ್ದರು.
ಈ ಜಾತ್ರೆ ಆ.30 ರವರೆಗೆ ಐದು ದಿನ ನಡೆಯಲಿದೆ. ಬೆಳಗ್ಗೆ 4 ಗಂಟೆಯಿಂದ ಭಕ್ತರು ಹರಕೆ ತೀರಿಸುವ ಜೊತೆಗೆ ಉರುಳು ಸೇವೆ ಮಾಡಿದರು. ಬೆಳಗ್ಗೆ 10ಕ್ಕೆ ದೇವಸ್ಥಾನದಲ್ಲಿ ದೇವರ ಪೂಜೆ ನೆರವೇರಿದ ನಂತರ ಸಿದ್ಧಲಿಂಗ ಶ್ರೀಗಳು ಹಾಗೂ ಮೂಲನಂದೀಶ್ವರನ ಪೂಜಾರಿ ಈರಕಾರ ಮುತ್ಯಾ ಅವರನ್ನು ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು.
ದೇವಸ್ಥಾನದಲ್ಲಿ ಮೂಲನಂದೀಶ್ವರ ಮೂರ್ತಿಗೆ ಪೂಜೆ ಹಾಗೂ ಆರತಿ ಬೆಳಗಿದ ಸಚಿವ ಶಾಸಕ ಶಿವಾನಂದ ಪಾಟೀಲ ಅವರು ನಂದಿ ಉತ್ಸವ ಮೂರ್ತಿಯನ್ನು ಬೆಳ್ಳಿ ಪಲ್ಲಕ್ಕಿ ಕಟ್ಟೆಯಲ್ಲಿನ ಅಲಂಕೃತ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿದರು. ನಂತರ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಪಟ್ಟಣದ ಶಿವಪ್ಪ ಮೋದಿ ಅವರ ಮನೆವರೆಗೆ ತೆರಳಿ ಹೋರಿಮಟ್ಟಿ ಗುಡ್ಡದ ದೇವಸ್ಥಾನದ ಕಳಸಕ್ಕೆ ಪೂಜೆ ಸಲ್ಲಿಸಿ ನಂತರ ನಿಡಗುಂದಿ ಮನೆತನದವರು ಕಲಶ ಹೊತ್ತುಕೊಂಡು ಅಗಸಿ, ಬಸವೇಶ್ವರ ವೃತ್ತ, ಚನ್ನಮ್ಮ ವೃತ್ತ, ಇಂಗಳೇಶ್ವರ ರಸ್ತೆ ಮಾರ್ಗವಾಗಿ ವಿಜೃಂಭಣೆಯಿಂದ ಬೆಳ್ಳಿ ಪಲ್ಲಕ್ಕಿ ಉತ್ಸವ ಹೋರಿಮಟ್ಟಿ ಗುಡ್ಡಕ್ಕೆ ತೆರಳಿತು.
ಬೆಳ್ಳಿ ಪಲ್ಲಕ್ಕಿ ಉತ್ಸವದ ಮೆರಣಿಗೆಯಲ್ಲಿ ಸಚಿವ ಶಾಸಕ ಶಿವಾನಂದ ಪಾಟೀಲ, ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಜಾತ್ರಾ ಕಮಿಟಿ ಅಧ್ಯಕ್ಷ ಗುರುಲಿಂಗ ಬಸರಕೋಡ, ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರ ಮಂಡಳಿಯ ಆಯುಕ್ತ ಬಸವರಾಜ ಪೂಜಾರಿ, ತಹಸೀಲ್ದಾರ್ ಯಮನಪ್ಪ ಸೋಮನಕಟ್ಟಿ, ಬಸವರಾಜ ಕಳ್ಳಿ, ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕಿ ಸಂಯುಕ್ತಾ ಪಾಟೀಲ, ಬಸವರಾಜ ಹಾರಿವಾಳ, ಶೇಖರ ಗೊಳಸಂಗಿ, ಶಂಕರಗೌಡ ಬಿರಾದಾರ, ಸಂಗು ವಾಡೇದ, ಬಸವರಾಜ ಗೊಳಸಂಗಿ, ರವಿ ಪಟ್ಟಣಶೆಟ್ಟಿ, ಬಸವರಾಜ ಕೋಟಿ, ರವಿ ರಾಠೋಡ, ಸಂಗಯ್ಯ ಕಾಳಹಸ್ತೇಶ್ವರಮಠ, ವಿಶ್ವನಾಥ ಹಾರಿವಾಳ, ಉಮೇಶ ಹಾರಿವಾಳ, ಸುರೇಶ ಹಾರಿವಾಳ, ರವಿ ಚಿಕ್ಕೊಂಡ, ಬಸವರಾಜ ರಾಯಗೊಂಡ, ಸಂಗಮೆಶ ಓಲೇಕಾರ, ಜಗದೇವಿ ಗುಂಡಳ್ಳಿ, ಶ್ರೀಶೈಲ ಹೆಬ್ಬಾಳ, ಮುತ್ತು ಕಿಣಗಿ, ಬಸವರಾಜ ಸಂಡೆ, ಸಿದ್ದಣ್ಣ ಮೋದಿ, ರಾಜು ಪಟ್ಟಣಶೆಟ್ಟಿ, ಸಂಗಪ್ಪ ವಾಡೇದ, ಮುತ್ತು ಡಂಬಳ, ಪಿಂಟು ಪಾಟೀಲ, ಮಂಜು ಹಾರಿವಾಳ, ಮಂಜು ಜಾಲಗೇರಿ, ಶ್ರೀಧರ ತೆಲಗಿ ಇತರರಿದ್ದರು.
ಕಲಾ ತಂಡಗಳ ಕಲರವ ಡೊಳ್ಳು ಕುಣಿತ, ಕರಡಿ ಮಜಲು, ಕಾರವಾರದ ಈಶ್ವರ ಕಲಾ ಗೊಂಬೆ ನೃತ್ಯ, ಉಡುಪಿಯ ಮುಲ್ಕಿ ಶಾಂಭವಿ ಕಲಾ ತಂಡ, ಹೊನ್ನಳ್ಳಿ ಕುದರೆ ಕುಣಿತ, ಬಬಲೇಶ್ವರದ ಪುರುವಂತಿಕೆ, ಮಸಬಿನಾಳ ಮ್ಯೂಜಿಕ್ ಸೇರಿ ವಿವಿಧ ಕಲಾತಂಡ ಹಾಗೂ ರಾಜ್ಯ- ಹೊರರಾಜ್ಯಗಳಿಂದ ಆಗಮಿಸಿದ ಕಲಾ ತಂಡಗಳು, ಗ್ರಾಮೀಣ ಸೊಗಡಿನ ವಾದ್ಯಗಳು ಮೆರವಣಿಗೆಗೆ ಮೆರಗು ನೀಡಿದವು. ಸಂಜೆ 7ಕ್ಕೆ ಮನಗೂಳಿ- ಬಿಜ್ಜಳ ರಾಜ್ಯ ಹೆದ್ದಾರಿ ಬಳಿಯ ಪಲ್ಲಕ್ಕಿ ಕಟ್ಟೆಗೆ ಬಂದು ತಲುಪಿತು. ಸಕಲ ವಾದ್ಯ ವೈಭವದೊಂದಿಗೆ ಆನೆ ಅಂಬಾರಿಯೊಂದಿಗೆ ಬೆಳ್ಳಿ ಪಲ್ಲಕ್ಕಿಯನ್ನು ಪುನಃ ದೇವಸ್ಥಾನಕ್ಕೆ ತರಲಾಯಿತು. ರಾತ್ರಿ ಇಡಿ ಪಲ್ಲಕ್ಕಿ ಉತ್ಸವ ಜರುಗಿತು. ಈ ಬಾರಿ ವಿವೇಕ ಬ್ರಿಗೇಡ್ ಸಂಸ್ಥೆಯಿಂದ ಸಹಾಸ್ರಾರು ಭಕ್ತರಿಗೆ ಸುರಮಾ ಪ್ರಸಾದ ವ್ಯವಸ್ಥೆ ಮಾಡಲಾಯಿತು. ಪರಸ್ಥಳದ ಭಕ್ತರಿಗೆ ದೇವಸ್ಥಾನದಿಂದ ಅನ್ನಪ್ರಸಾರ ವ್ಯವಸ್ಥೆ ಮಾಡಲಾಯಿತು. ಸಂಜೆ 7ಕ್ಕೆ ಆಂಗ್ಲಮಾಧ್ಯಮ ಶಾಲಾ ಆವರಣದಲ್ಲಿ ಬಾಣಬೀರಿಸು ಸಿಡಿಮದ್ದುಗಳನ್ನು ಸಿಡಿಸಲಾಯಿತು. ಸಿಡಿಮದ್ದು ಬಾನಂಗಳದತ್ತ ತೆರಳಿದಾಗ ಜನರು ಕೇ.ಕೇ. ಹಾಕಿ ಸಂಭ್ರಮಿಸಿದರು.