

ಬೀದರ್: ಬಸವ ತತ್ವ ಯಾವುದೇ ಒಂದು ಜಾತಿ, ಮತ, ಪಂಥ ಅಥವಾ ಸಮುದಾಯದ ಸ್ವತ್ತಲ್ಲ. ಅದು ಎಲ್ಲ ಸಮಾಜಗಳನ್ನು ಒಳಗೊಂಡಿರುವ ಜನಪರ ಚಿಂತನಶೀಲ ತತ್ವವಾಗಿದೆ ಎಂದು ಕೌಠಾ ಬಸವಯೋಗಾಶ್ರಮದ ಶ್ರೀ ಸಿದ್ದರಾಮ ಶರಣರು ಬೆಲ್ದಾಳ ಹೇಳಿದರು.
ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನಿಂದ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮನೆಯಂಗಳದಲ್ಲಿ ಮಾತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಾತ್ಮರ ತತ್ವಗಳನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸುವುದು ಸರಿಯಲ್ಲ. ನಾನು ಓದಿದ್ದು ಕೇವಲ 3ನೇ ತರಗತಿವರೆಗೆ. ಆದರೆ ಛಲದಿಂದ ಅಧ್ಯಾತ್ಮದ ಅಧ್ಯಯನ ಮಾಡಿದೆ. ಮೌಢ್ಯತೆಗಳಿಂದ ಹೊರಬರಲು ವಚನ ಸಾಹಿತ್ಯವೇ ನನಗೆ ಪ್ರೇರಣೆಯಾಯಿತು ಎಂದು ತಿಳಿಸಿದರು.
ಔರಾದ್ ನಲ್ಲಿ ನಡೆದಿದ್ದ ಸಿದ್ಧರಾಮೇಶ್ವರ ಜಯಂತಿ ದಿನ ಮಾಡಿದ ಭಾಷಣ ಆಲಿಸಿದ್ದ ಶ್ರೀ ಡಾ.ಚನ್ನಬಸವ ಪಟ್ಟದ್ದೇವರು ವೇದಿಕೆಯಲ್ಲಿ ಎದೆಗವಚಿಕೊಂಡು ಸಿದ್ಧರಾಮನೆಂದು ನಾಮಕರಣ ಮಾಡಿ ಶರಣತತ್ವ ದೀಕ್ಷೆ ನೀಡಿದರು. ಹೀಗಾಗಿ ಶರಣ ಸಾಹಿತ್ಯ, ತತ್ವ ನಾಡಿನಾದ್ಯಂತ ಪ್ರಸಾರ ಮಾಡಲು ಸಾಧ್ಯವಾಗಿದೆ. ಶರಣ ಸಾಹಿತ್ಯ ಕುರಿತು 15ಕ್ಕೂ ಹೆಚ್ಚು ಮೌಲಿಕ ಕೃತಿ ನೀಡಿರುವ ಸಂತೃಪ್ತಿ ನನಗಿದೆ. ವಚನ ಸಾಹಿತ್ಯಕ್ಕೆ ಧಕ್ಕೆ ಬಂದರೆ ಸಹಿಸಲಾಗದು ಎಂದರು.
ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಉದ್ಘಾಟಿಸಿ ಮಾತನಾಡಿ, ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ತಮ್ಮ ಮಾತು ಮತ್ತು ಕೃತಿಗಳ ಮೂಲಕ ಜನಸಾಮಾನ್ಯರಿಗೆ ತಲುಪಿಸುತ್ತಿರುವ ಸಾತ್ವಿಕ ಶರಣ ಚಿಂತಕ ಶ್ರೀ ಸಿದ್ದರಾಮ ಬೆಲ್ದಾಳ ಶರಣರು ಎಂದು ಬಣ್ಣಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕು ಅಧ್ಯಕ್ಷ ಎಂ.ಎಸ್. ಮನೋಹರ ಮಾತನಾಡಿ, ಧರ್ಮ ಬೋಧಕರು ದಾರಿ ತಪ್ಪಿ ನಡೆಯದಂತೆ ಎಚ್ಚರ ವಹಿಸಿದರೆ ಮಾತ್ರ ಅನುಯಾಯಿಗಳು ಸರಿ ದಾರಿಯಲ್ಲಿರುತ್ತಾರೆ. ಕೋಮುವಾದ, ಜಾತಿ ಜಗಳ ತಪ್ಪಿಸಲು ಧಾರ್ಮಿಕ ಮುಖಂಡರು ಒಂದಾಗಿ ಧರ್ಮ ಸಮನ್ವಯತೆಯೊಂದಿಗೆ ಶಾಂತಿ, ಸೌಹಾರ್ದತೆ ನೆಲೆಗೊಳಿಸುವ ಅಗತ್ಯವಿದೆ ಎಂದರು.
ಡಾ.ಕಾಶೀನಾಥ ಚಲುವಾ, ಶಿವಶಂಕರ ಟೋಕರೆ, ವಿದ್ಯಾವತಿ ಬಲ್ಲೂರ, ರಘುನಾಥ, ಜಗನ್ನಾಥ ಕಮಲಾಪುರೆ, ವೀರಶೆಟ್ಟಿ ಚನ್ನಶೆಟ್ಟಿ, ಶಿವಕುಮಾರ ಬೆಲ್ದಾಳ, ಸಿದ್ಧಾರೂಢ ಭಾಲ್ಕೆ ಇತರರಿದ್ದರು. ರೇವಣಪ್ಪ ಮೂಲಗೆ ಸ್ವಾಗತಿಸಿದರು. ವಿದ್ಯಾವತಿ ಹಿರೇಮಠ ನಿರೂಪಣೆ ಮಾಡಿದರು. ಡಾ.ಬಸವರಾಜ ಬಲ್ಲೂರ ವಂದಿಸಿದರು.
ಬುದ್ಧ ನನ್ನ ತಲೆ, ಬಸವಣ್ಣ ಹೃದಯವಾದರೆ, ಅಂಬೇಡ್ಕರ್ ದೇಹ. ಹೀಗಾಗಿ ಈ ಮೂವರೂ ಬೇರೆ ಬೇರೆಯಲ್ಲ. ಈ ಸತ್ಯವನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಯಾರಿಗೂ ಉಳಿಗಾಲವಿಲ್ಲ. ನಿರ್ಲಕ್ಷೃ ಮಾಡಿದರೆ ಮನುವಾದಿ ಕೈಗೊಂಬೆಯಾಗುವ ಸಾಧ್ಯತೆಯಿದೆ. ಎಲ್ಲ ಸಮುದಾಯ ಒಂದಾಗಿ ಸಮಭಾವದಿಂದ ನಡೆಯಬೇಕು.| ಶ್ರೀ ಸಿದ್ದರಾಮ ಶರಣರು ಬೆಲ್ದಾಳಕೌಠಾ ಬಸವಯೋಗಾಶ್ರಮ