

ಭಾಲ್ಕಿ: ವಿಶ್ವಗುರು ಬಸವಣ್ಣನವರು ವಿಚಾರಧಾರೆ ಸರ್ವಕಾಲಕ್ಕೂ ಪ್ರಸ್ತುತವಾಗಿವೆ. ಅವರು ೧೨ನೇ ಶತಮಾನದಲ್ಲಿ ಮಾಡಿದ ಕ್ರಾಂತಿ ಅದ್ಭುತವಾಗಿತ್ತು. ಬಸವಣ್ಣನವರು ಮಾದಾರ ಚನ್ನಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯನವರ ಹೃದಯದಲ್ಲಿ ಕೂಡಲಸಂಗಮದೇವರ ದರ್ಶನ ಪಡೆದು ಮಾನವೀಯತೆಯನ್ನು ಎತ್ತಿ ಹಿಡಿದಿದ್ದರು ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ನ ಅಧ್ಯಕ್ಷ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.
ಮಹಾರಾಷ್ಟ್ರದ ಪುಣೆ ಮಹಾನಗರದಲ್ಲಿ ಬಸವಸೇವಾ ಪ್ರತಿಷ್ಠಾನದಿಂದ ಮಂಗಳವಾರ ಆಯೋಜಿಸಿದ್ದ ವಿಶ್ವಗುರು ಬಸವಣ್ಣನವರ ಜಯಂತಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಸಮಾಜದಲ್ಲಿ ಬೇರು ಬಿಟ್ಟಿದ್ದ ಅಸ್ಪಶ್ಯತೆ ನಿರ್ಮೂಲನೆ, ಮೂಢನಂಬಿಕೆ ವಿರುದ್ಧ ಸಮರ ಸಾರಿದ್ದರು. ಸ್ತ್ರೀಯರ ಉದ್ಧಾರ, ಸರ್ವರಿಗೂ ಶಿಕ್ಷಣ, ಏಕದೇವೋಪಾಸನೆ, ಕಾಯಕ ಪ್ರಜ್ಞೆ ಮುಂತಾದ ಕಾರ್ಯವನ್ನು ಮಾಡಿದರು ಎಂದರು.
ಮಹಾರಾಷ್ಟ್ರದಲ್ಲಿ ಬಸವಪ್ರಜ್ಞೆ ವೇಗವಾಗಿ ಬೆಳೆಯುತ್ತಿರುವುದು ನಮಗೆ ಹೆಮ್ಮೆ ಎನಿಸುತ್ತದೆ. ಶ್ರೀಮಠದ ಅಡಿಯಲ್ಲಿ ಮಹಾರಾಷ್ಟ್ರ ಬಸವ ಪರಿಷತ್ತ ಸ್ಥಾಪಿಸುವ ಮೂಲಕ ಸುಮಾರು ೨೦೦ ಕ್ಕಿಂತಲೂ ಹಚ್ಚಿನ ಮರಾಠಿ ಪುಸ್ತಕಗಳನ್ನು ಪ್ರಕಟಿಸಿ, ಮಹಾರಾಷ್ಟ್ರಾದ್ಯಂತ ಬಸವಸಾಹಿತ್ಯ ಪ್ರಸಾರವಾಗಿದೆ. ಹೆಚ್ಚಿನ ಪ್ರಜ್ಞೆ ಬೆಳೆಯಲು ನಮ್ಮ ಶ್ರೀಮಠದಿಂದ ಪ್ರಕಟಿಸಿದ ಮರಾಠಿ ಸಾಹಿತ್ಯವೇ ಮೂಲ ಕಾರಣವೆಂದು ಹೇಳಲು ಅಭಿಮಾನ ಎನಿಸುತ್ತದೆ ಎಂದು ತಿಳಿಸಿದರು.
ಸೊಲ್ಲಾಪುರದ ಪತ್ರಕರ್ತ ಚನ್ನವೀರ ಭದ್ರೇಶ್ವರಮಠ, ರಾಜು ಜುಬರೆ ಉಪನ್ಯಾಸ ನೀಡಿದರು. ಮಹಾನಗರ ಪಾಲಿಕೆ ಸದಸ್ಯ ಹರಿಭಾವು ಚರವಡ ಅಧ್ಯಕ್ಷತೆ ವಹಿಸಿದ್ದರು.
ಚಂದ್ರಕಾಂತ ಹಾಲಕುಡೆ ಪ್ರಾಸ್ತಾವಿಕ ಮಾತನಾಡಿದರು. ನೀಲಕಂಠ ಪಾಟೀಲ ಸ್ವಾಗತಿಸಿದರು. ರವಿ ಖೂಬಾ ನಿರೂಪಣೆ ಮಾಡಿದರು. ಈ ಸಂದರ್ಭದಲ್ಲಿ ಸಂಜಯ ಇಂಡೆ, ನರ್ಸಿಂಗ್ ಮುಳೆ, ಸಂತೋಷ ಮಲ್ಲಶೆಟ್ಟಿ, ವಿಜಯ ಪಾಟೀಲ್ ಇತರರಿದ್ದರು. ಸಾಹಿತಿ ಡಾ.ನಳಿನಿ ವಾಗ್ಮಾರೆ ಅವರು ಆಂಗ್ಲ ಭಾಷೆಯಲ್ಲಿ ಬರೆದ ಲಿಂಗಾಯತ ಉಮನ್ಸ್ ಎಂಬ ಗ್ರಂಥ ಲೋಕಾರ್ಪಣೆಗೊಂಡಿತು.
ಪ್ರತಿಯೊಬ್ಬರೂ ಬಸವಪ್ರಜ್ಞೆ, ವಚನನಿಷ್ಠೆ ಬೆಳೆಸಿಕೊಳ್ಳಬೇಕು. ಇಷ್ಟಲಿಂಗದ ಮೇಲೆ ಭಕ್ತಿ ಇಟ್ಟುಕೊಂಡು ಬಸವತತ್ವವನ್ನು ನಿಜ ಜೀವನದಲ್ಲಿ ಆಚರಣೆಗೆ ತರುವ ಪ್ರಯತ್ನ ಮಾಡಬೇಕು.
| ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು
ಅಧ್ಯಕ್ಷರು ಅನುಭವ ಮಂಟಪ ಟ್ರಸ್ಟ್ ಬಸವಕಲ್ಯಾಣ