ಬಸವಣ್ಣನವರು ಕಟ್ಟಿದ ಭಕ್ತಿ ಸಾಮ್ರಾಜ್ಯ ಶಾಶ್ವತ

29BK5
 ಬಸವಕಲ್ಯಾಣದ ಅರಿವಿನ ಮನೆಯಲ್ಲಿ ೫ ದಿನಗಳ ಶಿವಯೋಗ ಅನುಷ್ಠಾನ ಸಮಾರೋಪ ಹಾಗೂ ಬಸವ ಪಂಚಮಿ ಕಾರ್ಯಕ್ರಮದಲ್ಲಿ ಶ್ರೀ ಪ್ರಭುದೇವ ಸ್ವಾಮೀಜಿ, ರವೀಂದ್ರ ಕೊಳಕುರ, ಚಂದ್ರಕಾಂತ ಕಣಜೆ, ಬಸವರಾಜ ಮಾಶೆಟ್ಟಿ, ಬಾಬುರಾವ ರಾಜೋಳೆ, ಸುಭಾಷ ಪತಂಗೆ, ಶಿಖರೇಶ್ವರ ರಾಜೊಳೆ, ಸೋನಾಲಿ ನೀಲಕಂಠ, ಸುಮಿತ್ರ ದಾವಣಗಾವೆ ಇತರರಿದ್ದರು.
Published on

ಬಸವಕಲ್ಯಾಣ: ಮರ್ತ್ಯಲೋಕದ ಮಹಾಮನೆ ಹಾಳಾಗಿ ಹೋಗಬಾರದೆಂದು ಭಕ್ತಿ ಪಥವ ತೋರಲು ಬಸವಣ್ಣನವರು ಬಂದರೆAದು ಶರಣರ ವಚನಗಳಲ್ಲಿ ನಾವು ನೋಡುತ್ತೇವೆ. ಅವರು ಕಟ್ಟಿದ ಭಕ್ತಿ ಸಾಮ್ರಾಜ್ಯ ಶಾಶ್ವತವಾಗಿದ್ದು, ಮನಕುಲವನ್ನು ರಕ್ಷಿಸುತ್ತಿದೆ ಎಂದು ಲಿಂಗಾಯತ ಮಹಾಮಠದ ಶ್ರೀ ಪ್ರಭುದೇವ ಸ್ವಾಮೀಜಿ ಹೇಳಿದರು.

ನಗರದ ಅರಿವಿನ ಮನೆಯಲ್ಲಿ ಮಂಗಳವಾರ ೫ ದಿನಗಳ ಶಿವಯೋಗ ಅನುಷ್ಠಾನ ಸಮಾರೋಪ ಹಾಗೂ ಬಸವ ಪಂಚಮಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾತಿಭೇದ, ವರ್ಗಭೇದ, ವರ್ಣಭೇದ ಮುಂತಾದ ಅಂಧಕಾರವನ್ನು ತುಂಬಿದ ಸಂದರ್ಭದಲ್ಲಿ ಬಸವಣ್ಣನವರು ಆಕಾಶ ದೀಪವಾಗಿ, ಜ್ಞಾನದ ಖಡ್ಗ ಹಿಡಿದು ಜಗತ್ತಿಗೆ ಬಂದವರು ಎಂದರು.

ಯಾರಿಗೆ ಯಾರಿಲ್ಲವೋ ಅವರಿಗೆ ನಾನಿದ್ದೇನೆ ಎಂದು ಅಭಯ ನೀಡಿ ಮೇಲೆತ್ತಿದವರು ಗುರು ಬಸವಣ್ಣನವರು. ಎಲ್ಲೆಲ್ಲಿ ಶರಣ ಗಣಮೇಳ ನಡೆವುದೋ ಅಲ್ಲಿ ಬಸವಣ್ಣನವರು ಇರುವರು. ನಾಡಿನಾದ್ಯಂತ ಇಂದು ಬಸವ ಪಂಚಮಿ ಆಚರಿಸಲಾಗುತ್ತಿದೆ. ಹುತ್ತಿಗೆ ಹಾಲೆರೆಯುವ ಮೌಢ್ಯ ಆಚರಣೆಯಿಂದ ಹೊರಬಂದು ಇಂದು ಬಸವ ಭಕ್ತರೆಲ್ಲ ಹಾಲು ಕುಡಿಯುವ ಹಬ್ಬವಾಗಿ ಆಚರಿಸುತ್ತಿರುವುದು ತುಂಬಾ ಸಂತೋಷ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಮುಖರಾದ ರವೀಂದ್ರ ಕೊಳಕುರ, ಚಂದ್ರಕಾಂತ ಕಣಜೆ, ಬಸವರಾಜ ಮಾಶೆಟ್ಟಿ, ಬಾಬುರಾವ ರಾಜೊಳೆ, ಸುಭಾಷ ಪತಂಗೆ, ಶಿಖರೇಶ್ವರ ರಾಜೋಳೆ, ಸುಮಿತ್ರ ದಾವಣಗಾವೆ ಇತರರಿದ್ದರು.

ಸೋನಾಲಿ ನೀಲಕಂಠ ಗುರುಪೂಜೆ ನೆರವೇರಿಸಿದರು. ಸೋಮನಾಥಪ್ಪ ರಾಜೇಶ್ವರೆ ವಚನ ಗಾಯನ ಮಾಡಿದರು. ಗೋರ್ಟಾ(ಬಿ) ಗ್ರಾಮದ ನೀಲಮ್ಮನ ಬಳಗದವರು ಹಾಗೂ ಬಸವಕಲ್ಯಾಣದ ಬಸವ ಭಕ್ತರು ಅರಿವಿನ ಮನೆಯಲ್ಲಿ ಇಷ್ಟಲಿಂಗ ಪೂಜೆ, ಪ್ರಾರ್ಥನೆ ಹಾಗೂ ೧೦೮ ವಚನ ಪಠಣ ಮಾಡುವ ಮೂಲಕ ಬಸವ ಪಂಚಮಿ ಆಚರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net