ಬಸವಣ್ಣನವರ ಸಮ ಸಮಾಜ ಕನಸ್ಸು ಸಾಕಾರವಾಗಬೇಕು

02-08-Shiva-3
ರಾಯಚೂರಿನ ಕನ್ನಡ ಭವನದಲ್ಲಿ ಮಂಗಳವಾರ ಸಂಜೆ ಏರ್ಪಡಿಸಿದ್ದ ಇಲಕಲ್‌ನ ಡಾ.ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆ ಕಾರ್ಯಕ್ರಮವನ್ನು ವೀರಶೈವ ಲಿಂಗಾಯತ ಮಹಾಸಭೆ ಜಿಲ್ಲಾಧ್ಯಕ್ಷ ಚಂದ್ರಶೇಖರ ಪಾಟೀಲ್ ಮಿರ್ಜಾಪುರ ಉದ್ಘಾಟಿಸಿದರು. ಸಾಹಿತಿಗಳಾದ ವಿಶ್ವಾರಾಧ್ಯ ಸತ್ಯಂಪೇಟೆ, ವೀರಹನುಮಾನ, ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ, ತಾಲೂಕು ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ ಇದ್ದರು.
Published on

ರಾಯಚೂರು: ಬಸವಣ್ಣನವರ ಸಮ ಸಮಾಜದ ಕನಸನ್ನು ಸಾಕಾರಗೊಳಿಸಲು ನಾವೆಲ್ಲ ಶ್ರಮಿಸಬೇಕಾಗಿದ್ದು, ಈ ಬಗ್ಗೆ ಸಮುದಾಯದ ಜನರಲ್ಲಿ ಪ್ರಜ್ಞೆ ಮೂಡಿಸುವ ಕಾರ್ಯ ಆಗಬೇಕಾಗಿದೆ ಎಂದು ಶಹಪುರದ ಸಾಹಿತಿ ವಿಶ್ವರಾಧ್ಯ ಸತ್ಯಂಪೇಟೆ ಹೇಳಿದರು.
ಸ್ಥಳೀಯ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಪ್ರತಿಭಾ ಸುಗಮ ಸಂಗೀತ ಸಂಸ್ಥೆ ವತಿಯಿಂದ ಮಂಗಳವಾರ ಸಂಜೆ ಹಮ್ಮಿಕೊಂಡಿದ್ದ ಇಲಕಲ್‌ನ ಡಾ.ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆ ಹಾಗೂ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಾಂತಶ್ರೀಗಳ ಸಮಾಜಮುಖಿ ಸೇವೆ ನಾಡಿಗೆ ಆದರ್ಶಪ್ರಾಯವಾಗಿದೆ. ಅವರ ತತ್ತ್ವ, ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಯುವಪೀಳಿಗೆ ವ್ಯಸನ ಮುಕ್ತವಾಗಬೇಕಾಗಿದೆ. ಯಾವುದು ಬಸವ ತತ್ತ್ವ, ಯಾವುದು ಅಲ್ಲ ಎಂದು ಸಮಾಜದ ಗೊಂದಲಕ್ಕೆ ಪರಿಹಾರ ಸೂಚಿಸಿ ಅದರಂತೆ ನಡೆದವರು ಮಹಾಂತ ಶ್ರೀಗಳಾಗಿದ್ದಾರೆ ಎಂದರು.
ಅಖಿಲ ಭಾರತ ವೀರಶೈವ ಲಿಂಗಾಯ ಮಹಾಸಭಾ ಜಿಲ್ಲಾಧ್ಯಕ್ಷ ಚಂದ್ರಶೇಖರ ಪಾಟೀಲ್ ಮಿರ್ಜಾಪುರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಾಂತಶ್ರೀಗಳ ವ್ಯಸನ ಮುಕ್ತ ಸಮಾಜ ನಿರ್ಮಾಣದ ಆಶಯದಂತೆ ಜನರು ದುಶ್ಚಟಗಳಿಂದ ದೂರ ಇರುವ ಮೂಲಕ ಸ್ವಾಸ್ಥ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.
ಇದಕ್ಕೂ ಮುಂಚೆ ಪ್ರತಿಭಾ ಗೋನಾಳ, ಜಿಂದಪ್ಪ ಅಸ್ಕಿಹಾಳ, ವೀರೇಂದ್ರ ಕುರ್ಡಿ, ರಾಘವೇಂದ್ರ ಆಶಾಪುರರಿಂದ ವಚನ ಗಾಯನ ಜರುಗಿತು. ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ ಅಧ್ಯಕ್ಷತೆ ವಹಿಸಲಿದ್ದರು.
ಕಾರ್ಯಕ್ರಮದಲ್ಲಿ ಸಾಹಿತಿ ವೀರಹನುಮಾನ, ವೈದ್ಯ ಡಾ.ಸುರೇಶ ಸಗರದ, ಕಸಾಪ ತಾಲೂಕು ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ, ಬಸವ ಕೇಂದ್ರದ ಉಪಾಧ್ಯಕ್ಷ ವಿಜಯಕುಮಾರ ಸಜ್ಜನ್, ಎಸ್‌ಕೆಇ ಸಂಸ್ಥೆ ಕಾರ್ಯದರ್ಶಿ ಡಾ.ಬಾಬುರಾವ್ ಶೇಗುಣಸಿ, ಶರಣಪ್ಪ ಗೋನಾಳ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net