

ಚಾಮರಾಜನಗರ: ಪ್ರಸ್ತುತ ಸಂದರ್ಭದಲ್ಲಿ ಪ್ರತಿಯೊಬ್ಬರು ಬಸವಣ್ಣನವರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಸಾಗಬೇಕಿದೆ ಎಂದು ಪೂರ್ವ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ನವೀನ್ ಹೇಳಿದರು.
ತಾಲೂಕಿನ ವಿ.ಸಿ.ಹೊಸೂರು ಗ್ರಾಮದಲ್ಲಿ ಇತ್ತೀಚಗೆ ಆಯೋಜಿಸಿದ್ದ ವಿಶ್ವಗುರು ಶ್ರೀಬಸವೇಶ್ವರರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರು 12 ನೇ ಶತಮಾನದಲ್ಲಿ ಯಾವ ಸಮುದಾಯವನ್ನು ಕಡೆಗಣಿಸದೆ ಮೇಲು-ಕೀಳು ಎಂಬ ಭಾವನೆಯಿಂದ ನೋಡದೆ ಅನುಭವ ಮಂಟಪದ ಮೂಲಕ ಸಮಾನತೆ ಸಾರಿದರು. ಈ ನಿಟ್ಟಿನಲ್ಲಿ ಬಸವಣ್ಣನವರ ತತ್ವಗಳನ್ನು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ಮುನ್ನಡೆಯಬೇಕು. ಬಸವಣ್ಣನವರು ವಚನಗಳ ಮೂಲಕ ನಾಡು ಕಟ್ಟಿ, ಕಾಯಕ ತತ್ವದ ಮೂಲಕ ವಿಶ್ವಕ್ಕೆ ಮಾದರಿಯಾದರು ಎಂದು ತಿಳಿಸಿದರು.
ಈ ವೇಳೆ ವೆಂಕಟಯ್ಯನಛತ್ರ ಹೊಸೂರು ಭಾಗದ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಮುಖಂಡರುಗಳೆಲ್ಲರೂ ಸೇರಿ 10ಹಳ್ಳಿ ಗೌಡರಾಗಿ ವಿ.ಸಿ.ಹೊಸೂರು ಗ್ರಾಮದ ಅಶೋಕ್ ಅವರನ್ನು ಆಯ್ಕೆ ಮಾಡಲಾಯಿತು. ಬಳಿಕ ದ್ವಿತೀಯ ಪಿಯುಸಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳು ಹಾಗೂ ಕ್ರೀಡಾಪಟುಗಳಿಗೆ ಸನ್ಮಾನಿಸಲಾಯಿತು.
ಗೌಡಿಕೆ ನಂಜುಂಡಸ್ವಾಮಿ, ಚಾಮುಲ್ ನಿರ್ದೇಶಕ ಎಚ್.ಎಸ್.ಬಸವರಾಜು, ಎಚ್.ಎಂ.ಸುಂದ್ರಪ್ಪ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಂಕನಶೆಟ್ಟಿಪುರ ಸೋಮಣ್ಣ, ಗ್ರಾ.ಪಂ ಸದಸ್ಯ ಮೆಡಿಕಲ್ ಅಶೋಕ್, ಎಚ್.ಆರ್.ಸ್ವಾಮಿ, ಶಮಿತ್ ಕುಮಾರ್, ರಾಜು ಹೊಸೂರು, ಮಹೇಶ್, ಲಯರ್ ಮಹೇಶ್, ಪುಟ್ಟಣ್ಣ, ಶಾಂತಪ್ಪ, ಮಹದೇವಪ್ಪ ಹಾಗೂ ಇತರರು ಹಾಜರಿದ್ದರು.