

ಭಾಲ್ಕಿ: ವಿದ್ಯಾರ್ಥಿಗಳು ಬಸವಣ್ಣನವರ ತತ್ವಗಳು, ಚಿಂತನೆಗಳು ಆದರ್ಶವಾಗಿರಿಸಿಕೊಂಡು ಸುಂದರ ಜೀವನ ರೂಪಿಸಿಕೊಳ್ಳಬೇಕು ಎಂದು ವಿಜಯಪುರದ ಶ್ರೀ ಅಮೃತಾನಂದ ಸ್ವಾಮೀಜಿ ನುಡಿದರು.
ಕರಡ್ಯಾಳ ಚನ್ನಬಸವೇಶ್ವರ ಗುರುಕುಲದ ಅನುಭವ ಮಂಟಪದಲ್ಲಿ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ನ ವತಿಯಿಂದ ಮಂಗಳವಾರ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ೧೨ನೇ ಶತಮಾನದಲ್ಲಿ ಬಸವಾದಿ ಶರಣರು ಮನುಕುಲದ ಏಳಿಗೆಗೆ ವಚನ ಸಾಹಿತ್ಯದ ಮೂಲಕ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ವಿದ್ಯಾರ್ಥಿಗಳು ಓದಿನ ಜತೆಗೆ ವಚನಗಳನ್ನು ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ಪಡೆದುಕೊಳ್ಳಬೇಕು. ಸಂಸ್ಕಾರ ವಿದ್ಯಾರ್ಥಿಗಳನ್ನು ಮೇರು ವ್ಯಕ್ತಿಗಳನ್ನಾಗಿ ಬೆಳೆಯಲು ಸಹಾಯಕವಾಗುತ್ತದೆ. ಕೆಟ್ಟ ವಿಚಾರಗಳು ಮನುಷ್ಯನ ಬೆಳವಣಿಗೆಗೆ ಅಡ್ಡಿಯಾಗುತ್ತದೆ. ಮನಸ್ಸಿನಲ್ಲಿ ಸದಾ ಒಳ್ಳೆತನ, ಉತ್ತಮ ಆಲೋಚನೆಗಳನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಬಸವಣ್ಣನವರ ವಿಚಾರಧಾರೆಗಳನ್ನು ಇಡೀ ವಿಶ್ವವೇ ಮೆಚ್ಚಿಕೊಂಡಿದೆ. ಅವರ ಜನಪರ ಜೀವಪರ ಚಿಂತನೆಗಳನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. ಬಸವಣ್ಣನವರು ಅನುಭವ ಮಂಟಪದಲ್ಲಿ ಜಾತಿಭೇದ ಮರೆತು ಎಲ್ಲ ವರ್ಗದ ಶರಣ ಶರಣೆಯರಿಗೆ ಆಶ್ರಯ ಕಲ್ಪಿಸಿ ಸಮಾನತೆ ಸಾರಿದ್ದರು. ಅಂತಹ ಮಹಾತ್ಮರ ವಿಚಾರಧಾರೆಗಳು ಎಲ್ಲರಿಗೂ ಪ್ರೇರಣೆಯಾಗಬೇಕು ಎಂದರು.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀ ಬಸವಲಿಂಗ ಸ್ವಾಮೀಜಿ, ಶ್ರೀ ಶಿವಬಸವ ಸ್ವಾಮೀಜಿ, ಉಪ ಪ್ರಾಚಾರ್ಯ ಸಿದ್ರಾಮ ಗೊಗ್ಗಾ, ಅಲ್ಲಮ್ಮಪ್ರಭು ಬಿಇಡಿ ಕಾಲೇಜಿನ ಪ್ರಾಚಾರ್ಯ ಡಾ.ಆಶಾ ಮುದ್ದಾಳೆ ಇದ್ದರು. ಮಧುಕರ ಗಾಂವಕರ ನಿರೂಪಣೆ ಮಾಡಿ ವಂದಿಸಿದರು.