

ಮೈಸೂರು: ಬಸವಣ್ಣನವರ ಚಿಂತನೆಗಳು ಸಾರ್ವಕಾಲಿಕವಾಗಿದ್ದರೂ 21ನೇ ಶತಮಾನದಲ್ಲಿ ಸಾಕಾರಗೊಳಿಸಲು ಆಗದಿರುವ ಬೌದ್ಧಿಕ ದಾರಿದ್ರೃ ಎದುರಾಗಿದೆ ಎಂದು ಶ್ರೀ ಬಸವೇಶ್ವರ ಸಾಮಾಜಿಕ ಸಂಶೋಧನೆ ಪರಿಷ್ಕರಣಾ ಮತ್ತು ವಿಸ್ತರಣಾ ಕೇಂದ್ರದ ಸಂದರ್ಶಕ ಪ್ರಾಧ್ಯಾಪಕ, ಸಾಹಿತಿ ಡಾ.ಅರವಿಂದ ಮಾಲಗತ್ತಿ ಕಳವಳ ವ್ಯಕ್ತಪಡಿಸಿದರು.
ಕನ್ನಡ ಹಾಗೂ ಶರಣ ಸಾಹಿತ್ಯ ಪರಿಷತ್ ನಗರ ಘಟಕದ ಸಹಯೋಗದಲ್ಲಿ ಎಸ್‌ಡಿಎಂ ಮಹಿಳಾ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ‘ವಚನ ಸಾಹಿತ್ಯ ವರ್ತಮಾನದ ಸ್ಪಂದನೆ’ ಕುರಿತು ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಬಸವಣ್ಣನವರನ್ನು ನಾಡಿನ ಸಾಂಸ್ಕೃತಿಕ ನಾಯಕ ಎಂದು ಸರ್ಕಾರ ಘೋಷಿಸಿದೆ. ಯಾವ ನಾಯಕರ ಆಲೋಚನಾ ಕ್ರಮಗಳು ವರ್ತಮಾನಕ್ಕೆ ಬೇಕಾಗಿವೆಯೋ ಹಾಗೂ ಅಗತ್ಯವಾಗಿವೆಯೋ ಅಂತಹ ನಾಯಕರನ್ನು ಸಾಮಾನ್ಯವಾಗಿ ಎವರ್‌ಗ್ರೀನ್ ಎಂದು ಹೇಳುತ್ತಾರೆ. ಸದಾ ಕಾಲ ನಿತ್ಯ ನೂತನವಾಗಿರುವಂತಹ ನಾಯಕ ಯಾರಾದರೂ ರಾಜ್ಯದಲ್ಲಿದ್ದರೆ ಅದು ಬಸವಣ್ಣ ಮಾತ್ರ. ಅವರ ಚಿಂತನೆ ಸಾರ್ವಕಾಲಿವಾಗಿವೆ ಎಂದು ತಿಳಿಸಿದರು.
ಸಾಂಸ್ಕೃತಿಕ ನಾಯಕ ಎಂದು ಘೋಷಿಸಿ ಕೂಡಲೇ ಅವರು ನಮಗೆ ಸಾಂಸ್ಕೃತಿಕ ನಾಯಕರು ಆಗುವುದಿಲ್ಲ. ಅವರ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಾಂಸ್ಕೃತಿಕ ನಾಯಕನಿಗೆ ಕೊಡುವ ಗೌರವ ಹಾಗೂ ಮನ್ನಣೆ ಕೊಟ್ಟಂತಾಗುತ್ತದೆ.
ತತ್ವವನ್ನು ಬಾಯಿಂದ ಹೇಳಿ ಅದನ್ನು ಜಾರಿಗೆ ತಾರದಿದ್ದರೆ, ನಡೆ ನುಡಿ ಒಂದಾಗದೆ ಹೋದರೆ ಬದುಕು ಬಸವಣ್ಣನವರ ತಾತ್ವಿಕ ನಿಲುವಿಗೆ ಬದ್ಧವಾಗಿಲ್ಲ ಎಂದರ್ಥ. ಹೀಗಾಗಿ ನಡೆ, ನುಡಿ ಒಂದಾಗಬೇಕಾದಂತಹ ಸನ್ನಿವೇಶವನ್ನು ಕೂಡ ಬಸವಣ್ಣ ಹೇಳಿದ್ದು ಅರ್ಥವಾಗಬೇಕು ಎಂದು ಮಾಲಗತ್ತಿ ಹೇಳಿದರು.
ವರ್ತಮಾನದ ಸಂಘರ್ಷಗಳು ಆರೋಗ್ಯಕರವಾಗರಬೇಕೇ ಹೊರತು ನಕಾರಾತ್ಮಕ ದೃಷ್ಟಿಯಿಂದ ನೋಡುವುದು ಸರಿಯಲ್ಲ. ವರ್ತಮಾನದ ವಿಷಯಗಳನ್ನೂ ಅವುಗಳ ಜ್ಞಾನದ ಬಗ್ಗೆ ಎಚ್ಚರದಿಂದಾಗ ಮಾತ್ರ ನಾವು ಸಾಹಿತ್ಯದ ಹೇಗೆ ಗ್ರಹಿಸಬೇಕು ಹಾಗೂ ವ್ಯಾಖ್ಯಾನಿಸಬೇಕೆಂದು ತಿಳಿಯುತ್ತದೆ. ಈ ಕಾರಣದಿಂದಲೇ ನಾವು ವಚನ ಸಾಹಿತ್ಯ ಮತ್ತು ಪರಂಪರೆಯೊಟ್ಟಿಗೆ ಇದ್ದಂತಹ ಸಂಬಂಧ ಜತೆಯಲ್ಲಿ ನಡೆದುಕೊಂಡು ಬಂದಿದೆ ಎಂದರು. ವಿದ್ಯಾರ್ಥಿಗಳು ಬಸವಧರ್ಮ, ಶರಣ ಧರ್ಮವನ್ನು ಅರ್ಥಮಾಡಿಕೊಂಡಾಗ ಮಾತ್ರ ಮತೀಯ ಚಿಂತನೆಗಳಿಂದ ಹೊರಬರಲು ಸಾಧ್ಯ. ಜತೆಗೆ, ಹೊಸ ಮಾರ್ಗಗಳು ತೆರೆದುಕೊಳ್ಳುತ್ತದೆ ಎಂದರು
ಪ್ರಾಂಶುಪಾಲೆ ಪ್ರೊ.ಭಾರತಿ, ಕನ್ನಡ ವಿಭಾಗದ ಮುಖ್ಯಸ್ಥೆ ಹಾಗೂ ಸಂಚಾಲಕಿ ಡಾ.ವಿನೋದಾ, ಐಕ್ಯೂಎಸಿ ಸಂಯೋಜಕಿ ಪ್ರೊ.ಕೆ.ಎಸ್.ಸುಕೃತಾ, ಶರಣ ಸಾಹಿತ್ಯ ಪರಿಷತ್ ನಗರಾಧ್ಯಕ್ಷ ಮ.ಗು.ಸದಾನಂದಯ್ಯ ಇದ್ದರು.