ಬಸವಣ್ಣನ ವಿಚಾರಗಳಿಗೆ ರಾಜಾಶ್ರಯ ಸಿಗಲಿ

Capture2
Published on

ಬಸವಕಲ್ಯಾಣ: ಬಸವಣ್ಣನ ವಿಚಾರಗಳಿಗೆ ರಾಜಾಶ್ರಯ ಸಿಗದ ಕಾರಣ ಇಂದು ಬಸವ ಧರ್ಮ ಹಿಂದುಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಲೂ ಕಾಲ ಮಿಂಚಿಲ್ಲ. ಆಡಳಿತ ಪಕ್ಷಗಳು ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡುವುದರ ಮೂಲಕ ರಾಜಾಶ್ರಯ ಕಲ್ಪಿಸಿ ಬಸವಣ್ಣನವರ ವಿಚಾರಗಳನ್ನು ಎತ್ತಿ ಹಿಡಿಯಬೇಕು ಎಂದು ಹುಲಸೂರು ಶ್ರೀ ಡಾ.ಶಿವಾನಂದ ಸ್ವಾಮೀಜಿ ಹೇಳಿದರು.

ಗುಣತೀರ್ಥವಾಡಿ ಕಲ್ಯಾಣ ಮಹಾಮನೆ ಮಹಾಮಠದಲ್ಲಿ 889ನೇ ಬಸವ ಜಯಂತಿ ನಿಮಿತ್ತ ಶುಕ್ರವಾರ ಹಮ್ಮಿಕೊಂಡಿದ್ದ ಎಲ್ಲರಿಗೂ ಬೆಲ್ಲಾದ ಕಲ್ಯಾಣ ಬಸವಣ್ಣ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿ, ಹನ್ನೆರಡನೇ ಶತಮಾನದ ಬಸವಾದಿ ಪ್ರಥಮರ ಮುಖ್ಯ ಧ್ಯೇಯವೇ ಸರ್ವರು ಸಮಾನತೆಯಿಂದ ಬದುಕಬೇಕೆಂಬುದಾಗಿತ್ತು. ಇದಕ್ಕಾಗಿ ಚಳವಳಿಯನ್ನೇ ರೂಪಿಸಿ ದೇಶದಲ್ಲಿ ಜಾತಿ ವ್ಯವಸ್ಥೆ ನಿರ್ಮೂಲನೆಗೆ ಮುನ್ನುಡಿ ಬರೆದರು ಎಂದರು.

ಶ್ರೀ ನಿಜಲಿಂಗ ಸ್ವಾಮೀಜಿ ಮಾತನಾಡಿ, ಶ್ರೀ ಬಸವಪ್ರಭು ಸ್ವಾಮೀಜಿಯವರು ಏಪ್ರಿಲ್ 29ಕ್ಕೆ ಜಂಗಮ ದೀಕ್ಷೆ ಪಡೆದು 16 ವಸಂತಗಳನ್ನು ಕಳೆದಿದ್ದಾರೆ. ಸಮಾಜದಲ್ಲಿ ಎಂಥ ವಿಷಮ ಪರಿಸ್ಥಿತಿ ಎದುರಾದರೂ ಎಲ್ಲರ ಜತೆ ಮೃದು ಹೃದಯದಿಂದ ಮಾತಾನಾಡುತ್ತ ಸೌಹಾರ್ದತೆ ಬದುಕನ್ನು ತಮ್ಮದಾಗಿಸಿಕೊಂಡಿದ್ದಾರೆ. ಅವರೊಬ್ಬ ನಡೆದಾಡುವ ನಿಜ ಜಂಗಮ ಎಂದು ಬಣ್ಣಿಸಿದರು.

ನೇತೃತ್ವ ವಹಿಸಿ ಪ್ರವಚನ ನಡೆಸಿಕೊಟ್ಟ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ದೇವನ ಕೊಡುಗೆಯಾದ ಈ ಸೃಷ್ಟಿಯಲ್ಲಿ ಮಾನವನು ವಿಶೇಷ ಗುಣಗಳನ್ನು ಹೊತ್ತು ಬಂದಿರುವನು. ಇಂಥ ಸಮೃದ್ಧ ಜೀವನ ಹಾಳು ಮಾಡಿಕೊಳ್ಳದೆ ಶರಣರು, ಸಂತರು, ಮಹಾತ್ಮರ ಸಂದೇಶಗಳನ್ನು ಯೋಗ್ಯ ಗುರುಗಳಿಂದ ಪ್ರವಚನದ ಮೂಲಕ ಆಲಿಸಿ ಸಾರ್ಥಕಗೊಳಿಸಿಕೊಳ್ಳಬೇಕು ಎಂದರು.
ಹುಲಸೂರು ತಹಸೀಲ್ದಾರ್ ಶಿವಾನಂದ ಮೇತ್ರೆ ಮಾತನಾಡಿ, ಬಸವಾದಿ ಶರಣರು ವಚನಗಳೆಂಬ ಅನುಭಾವ ಸಾಹಿತ್ಯವನ್ನು ರಚಿಸಿ ಅನುಭವ ಮಂಟಪದ ಮೂಲಕ ವಿಶ್ವದ ಜನರ ಸಮಾನತೆಗೆ ಹೊಸ ಭಾಷ್ಯವನ್ನು ಬರೆದಿದ್ದಾರೆ ಎಂದರು.

ತೀರ್ಥಪ್ಪ ಹುಮನಾಬಾದ್ ಧ್ವಜಾರೋಹಣ ನೆರವೇರಿಸಿದರು. ಮಲ್ಲಿಕಾರ್ಜುನ ವಿಕೆ ಸಲಗರ, ಸುಧಾಕರ ರೆಡ್ಡಿ, ದಿಲೀಪ ಶಿಂಧೆ, ಲಕ್ಷ್ಮಣ ಮೇತ್ರೆ, ನಾಗಶೆಟ್ಟಿ ದಾಡಗೆ, ಸವಿತಾ ಸಜ್ಜನ ಶೆಟ್ಟಿ, ರಾಮ ಮೇತ್ರೆ, ರಾಮ ಮಜ್ಜಿಗೆ, ಸಂಗಮೇಶ ತಾವರಖೇಡ, ಗುರುದೇವಿ, ಸೋನಾಲಿ ನೀಲಕಂಠ, ವಿಠಲ ಮೇತ್ರೆ, ಮಲ್ಲಿಕಾರ್ಜುನ ಮಾಳಿ ಇತರರಿದ್ದರು. ಶ್ರೀದೇವಿ ಕಾಕನಾಳೆ ಸ್ವಾಗತಿಸಿದರು. ಸುಮಿತ್ರಾದೇವಿ ದಾವಣಗಾವೆ ನಿರೂಪಣೆ ಮಾಡಿದರು. ಚಂದ್ರಕಾಂತ ಗುಂಗೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net