ಬಸವಣ್ಣನ ವಚನಗಳು ಉತ್ತಮ ಸಮಾಜಕ್ಕೆ ದೀವಿಗೆಗಳು

25Kush01
Published on

ಕುಶಾಲನಗರ: ಬಸವೇಶ್ವರರು ರಚಿಸಿರುವ ವಚನಗಳ ಸಾರವನ್ನರಿತು ಅದರಂತೆ ನಡೆದದ್ದೇ ಆದಲ್ಲಿ ಅತ್ಯಂತ ಸಂಸ್ಕಾರಯುತ ಹಾಗೂ ಆರೋಗ್ಯವಂತ ಸಮಾಜವನ್ನು ಕಾಣಬಹುದಾಗಿದೆ ಎಂದು ಹುಣಸೂರು ವನ್ಯಜೀವಿ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ದಯಾನಂದ ಹೇಳಿದರು.


ಕೊಡಗು ಜಿಲ್ಲಾ ವಚನ ಸಾಹಿತ್ಯ ವೇದಿಕೆ ವತಿಯಿಂದ ಮಂಗಳವಾರ ಕುಶಾಲನಗರದ ಹಿಂದುಳಿದ ವರ್ಗಗಳ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಇಂದಿನ ವಿದ್ಯಾರ್ಥಿಗಳು ಬಸವಾದಿ ಶರಣರ ವಚನಗಳನ್ನು ಓದಿ ಅರ್ಥೈಸಿಕೊಂಡು ಸಜ್ಜನರಾಗಬೇಕೆಂದು ಕರೆಕೊಟ್ಟರು.


ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯ ತಾಲೂಕು ಅಧಿಕಾರಿ ಸ್ವಾಮಿ ಮಾತನಾಡಿ, ಬಸವಾದಿ ಶರಣರು, ಸಾಧು ಸಂತರಂತಹ ಪ್ರಾತಃಸ್ಮರಣೀಯರನ್ನು ಮುಂಜಾನೆ ನೆನೆವ ಮೂಲಕ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಲು ಮುಂದಾಗಬೇಕು ಎಂದರು.


ಕೊಡಗು ಜಿಲ್ಲಾ ವಚನ ಸಾಹಿತ್ಯ ವೇದಿಕೆ ಅಧ್ಯಕ್ಷ ಕೆ.ಎಸ್.ಮೂರ್ತಿ ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್ ಮೊದಲಾದ ಮಹನೀಯರ ಜೀವನ ಸಾಧನೆಗಳನ್ನು ಇಂದಿನ ವಿದ್ಯಾರ್ಥಿಗಳು ಅರಿಯುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕೆಂದರು.


ವಿವೇಕಾನಂದ ವಿದ್ಯಾಸಂಸ್ಥೆ ಅಧ್ಯಕ್ಷ ಎನ್.ಎನ್.ಶಂಭುಲಿಂಗಪ್ಪ, ಉದ್ಯಮಿ ಪಾಣತ್ತಲೆ ಗಿರೀಶ್, ವಸತಿ ನಿಲಯದ ಮೇಲ್ವಿಚಾರಕಿ ಕರುಣಾಕ್ಷಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net