ಬಸವಣ್ಣನ ವಚನಗಳನ್ನು ತಿದ್ದುವ ಹುನ್ನಾರ

TKE SHARANA)
ಹಾದಿಕೆರೆ ಗ್ರಾಮದಲ್ಲಿ ಏರ್ಪಡಿಸಿದ್ದ ಶರಣ ಸಾಹಿತ್ಯದ ವಚನಗಾರ್ತಿಯರ ಸಂಸ್ಮರಣೆ ಮತ್ತು ಮಾತೆ ಮಹಾದೇವಿ ಜನ್ಮ ದಿನಾಚರಣೆಯನ್ನು ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಗಂಗಾಧರಪ್ಪ ಉದ್ಘಾಟಿಸಿದರು. ಎಚ್.ತಿಮ್ಮಯ್ಯ, ಟಿ.ದಾದಾಪೀರ್, ಮಮತಾ, ಚಂದ್ರಪ್ಪ ಇತರರಿದ್ದರು.
Published on

ತರೀಕೆರೆ: ಬಸವಣ್ಣನ ವಚನಗಳನ್ನು ತಿದ್ದುವ ತಪ್ಪು ನಡೆಯುತ್ತಿದೆ ಎಂದು ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಗಂಗಾಧರಪ್ಪ ತಿಳಿಸಿದರು.

ಹಾದಿಕೆರೆ ಗ್ರಾಮದ ಶ್ರೀ ಗೌರಮ್ಮ ದೇಗುಲ ಆವರಣದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಹಾಗೂ ಕದಳಿ ಮಹಿಳಾ ವೇದಿಕೆ ಸಹಯೋಗದಲ್ಲಿ ವಿಶ್ವ ಮಹಿಳಾ ದಿನಾಚರಣೆ ಹಿನ್ನೆಲೆ ಏರ್ಪಡಿಸಿದ್ದ ಶರಣ ಸಾಹಿತ್ಯದ ವಚನಗಾರ್ತಿಯರ ಸಂಸ್ಮರಣೆ ಮತ್ತು ಮಾತೆ ಮಹಾದೇವಿ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಸವತತ್ವ ದೂರ ಇರುವವರನ್ನು ಹತ್ತಿರಕ್ಕೆ ಮಾತ್ರವಲ್ಲ, ಸಂಪರ್ಕಕ್ಕೆ ತರುತ್ತದೆ. ಮಕ್ಕಳಲ್ಲಿ ಸಂಸ್ಕಾರ ಬೆಳೆಸುವ ಕೆಲಸವಾಗಬೇಕು ಎಂದರು.

ಶಿಕ್ಷಕ ಚೇತನ್ ಗೌಡ ಮಾತನಾಡಿ, ಶೋಷಣೆ, ಕಂದಾಚಾರ ಮತ್ತು ಮೌಢ್ಯ ತೊಲಗಿಸಲು ಬಸವಣ್ಣ ಇತರ ಶರಣರು ಜನ್ಮತಾಳಬೇಕಾಯಿತು. 12ನೇ ಶತಮಾನ ಮಹಿಳೆಯರನ್ನು ಜತೆಯಲ್ಲಿ ಕರೆದುಕೊಂಡು ಹೋಗುವ ಕೆಲಸ ಮಾಡಿದೆ. ಶ್ರೀಗುರು ಸಿದ್ದರಾಮೇಶ್ವರರು ವಚನಗಳ ಮೂಲಕ ಮಹಿಳೆಯರನ್ನು ಗೌರವಿಸಿದವರಲ್ಲಿ ಮೊದಲಿಗರು. ಶರಣೆ ಸತ್ಯಕ್ಕ, ಹಾದರ ಕಾಯಕದ ಗಂಗಮ್ಮ, ಕಾಳವ್ವೆ, ಸೂಳೆ ಸಂಕವ್ವೆ ಸೇರಿ ಬಹಳಷ್ಟು ವಚನಗಾರ್ತಿಯರು ಸಮಾಜದ ಮುಖ್ಯವಾಹಿನಿಗೆ ಬಂದು ವಚನ ಪರಂಪರೆ ಮುಂದುವರಿಸಿದ್ದರು ಎಂದು ಹೇಳಿದರು.

ಶಿಕ್ಷಕ ಟಿ.ಎಸ್.ನಾಗರಾಜ್ ಮಾತನಾಡಿ, ಶರಣರು ಬಡತನ ಪ್ರೀತಿಸಿದರು. ಆಯ್ಯಕ್ಕಿ ಲಕ್ಕಮ್ಮ ಕಾಯಕನಿಷ್ಠೆ, ಆತ್ಮ ಗೌರವ, ಸಾಮಾಜಿಕ ಕಳಕಳಿ ಹೊಂದಿದ್ದರು. ಆಸೆಯನ್ನು ನಿಯಂತ್ರಿಸುವ ಸಂದೇಶ ವಚನಗಳ ಮೂಲಕ ಸಾರಿದ್ದರು ಎಂದರು.

ತಾಲೂಕು ಶರಣ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ನಾಗೇನಹಳ್ಳಿ ಎಚ್.ತಿಮ್ಮಯ್ಯ ಮಾತನಾಡಿ, ಸಮಾಜದಲ್ಲಿ ಬಸವ ತತ್ವ ಹೆಚ್ಚು ಪಸರಿಸಿ ನಾಡಿನ ಕಲ್ಯಾಣವಾಗಲಿ ಎಂದು ಆಶಿಸಿದರು.

ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಟಿ.ದಾದಾಪೀರ್, ತಾಲೂಕು ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಚಂದ್ರಪ್ಪ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಮಮತಾ, ಲೇಖಕ ಮನಸುಳಿ ಮೋಹನ್, ಕಲಾವಿದೆ ಕೆ.ಸಿ.ವಿಜಯಕುಮಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net