ಬಸವಣ್ಣ ಸಾಮಾಜಿಕ ಕ್ರಾಂತಿಯ ಹರಿಕಾರ

60
Published on

ವಿಜಯವಾಣಿ ಸುದ್ದಿಜಾಲ ನೆಲಮಂಗಲ

ವಚನಕಾರ ಬಸವಣ್ಣ ಸಾಮಾಜಿಕ ಕ್ರಾಂತಿಯ ಹರಿಕಾರ ಎಂದು ಬೇವೂರು ಮಠದ ಶ್ರೀ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ ಬಣ್ಣಿಸಿದರು.

ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿಯ ಹೊನ್ನಸಂದ್ರದಲ್ಲಿ ಬಸವ ಭಾರತ ಪ್ರತಿಷ್ಠಾನ, ಪವಾಡ ಶ್ರೀ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕೇಂದ್ರ, ವೀರಶೈವ ಲಿಂಗಾಯತ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘ, ಲಿಂಗಾಯತ ಮಹಾಸಭೆ ಹಾಗೂ ಪವಾಡ ಶ್ರೀ ಬಸವಣ್ಣ ದೇವರ ಮಠದ ಸಹಯೋಗದಲ್ಲಿ ಮಂಗಳವಾರ ಅಯೋಜಿಸಿದ್ದ ಬಸವ ಸಂಚಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

12ನೇ ಶತಮಾನದಲ್ಲಿ ಬಸವಣ್ಣನವರ ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ ಎಂಬ ಒಂದೇ ಒಂದು ವಚನ ಇಡೀ ಜೀವನ ಸಾರಾಂಶವನ್ನು ನೀಡುತ್ತದೆ. ಶರಣರು ನೀಡಿದ ವಚನಗಳನ್ನು ಪಾಲಿಸಿದಲ್ಲಿ, ಜೀವನದಲ್ಲಿ ಬರುವಂತಹ ಯಾವುದೇ ಸಮಸ್ಯೆ ನಿವಾರಿಸಿಕೊಳ್ಳುವಂತಹ ಶಕ್ತಿ ದೊರಕುತ್ತದೆ. ಸಾಮರಸ್ಯ, ಹೊಂದಾಣಿಕೆ ಜೀವನದ ಜತೆ ಸಮಾಜದಲ್ಲಿ ಒಬ್ಬ ಉತ್ತಮ ಮನುಷ್ಯನಾಗಲು ಸಾಧ್ಯ ಎಂದರು.

ಪವಾಡ ಶ್ರೀಬಸವಣ್ಣ ದೇವರ ಮಠದ ಶ್ರೀಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಎಲ್ಲರನ್ನೂ ಗೌರವಿಸುವುದು, ಸಮನಾಗಿ ಕಾಣುವುದು ಬಸವ ತತ್ವದ ಗುಣವಾಗಿದೆ. ಮನುಷ್ಯ ಸಾರ್ಥಕವಾಗಿ ಒಂದು ದಿನ ಬದುಕಿದರೂ ಅದು ಸಾರ್ಥಕವಾದ ಬದುಕಾಗುತ್ತದೆ. ಎಲ್ಲರೂ 100 ವರ್ಷ ಬದುಕುವ ಪದ್ಧತಿ ಪಾಲಿಸಬೇಕು. ಒಳ್ಳೆಯವರನ್ನು ನೋಡ್ತಾ ಅವರ ಹಾಗೆ ಆಗಲು ಬಯಸಬೇಕು. ಇದ್ದ ಜಾಗವನ್ನೇ ಸ್ವರ್ಗ ಮಾಡಿಕೊಳ್ಳಬೇಕು ಎಂದರು.

ಗ್ರಾಮದ ಹಿರಿಯ ಮುಖಂಡರನ್ನು ಸನ್ಮಾನಿಸಲಾಯಿತು. ಚನ್ನಪಟ್ಟಣ ವಿರಕ್ತಮಠದ ಶ್ರೀ ಚರಮೂರ್ತಿ ಶಿವರುದ್ರ ಸ್ವಾಮೀಜಿ, ವನಕಲ್ಲು ಮಠದ ಶ್ರೀ ಬಸವ ರಮಾನಂದ ಸ್ವಾಮೀಜಿ, ಕಂಚುಗಲ್ಲು ಬಂಡೇಮಠದ ಶ್ರೀಮಹಾಲಿಂಗ ಸ್ವಾಮೀಜಿ, ಕಂಬಾಳು ಮಠದ ಶ್ರೀಚನ್ನವೀರ ಶಿವಾರ್ಚಾಯ ಸ್ವಾಮೀಜಿ, ವೀರಶೈವ ಲಿಂಗಾಯತ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಆರ್.ನಾಗರಾಜು, ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಬಿ.ಶಿವಶಂಕರ್, ಗ್ರಾ.ಪಂ.ಸದಸ್ಯರಾದ ಸಂಪತ್ ಕುಮಾರ್, ವಿಜಯ್ ಕುಮಾರ್, ಪ್ರೇಮಕುಮಾರಿ, ಮುಖಂಡರಾದ ಸಿದ್ದಲಿಂಗಯ್ಯ, ಚಂದ್ರಪ್ಪ, ಶಿವಶಂಕರ್ ಇದ್ದರು.

ಮನೆಮನೆಗೆ ವಚನಕಾರರ ಭಾವಚಿತ್ರ ವಿತರಣೆ: ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ನೂರಕ್ಕೂ ಹೆಚ್ಚು ಮನೆಗಳಿಗೆ ತೆರಳಿದ ಶ್ರೀ ಸಿದ್ದಲಿಂಗ ಸ್ವಾಮೀಜಿ ಮತ್ತು ಅವರ ಬಸವ ಸಂಚಾರದ ತಂಡ ಶರಣೆ ನೀಲಾಂಬಿಕೆ, ಚನ್ನಬಸವಣ್ಣ ಅವರ ಭಾವಚಿತ್ರಗಳನ್ನು ಮನೆಮನೆಗೆ ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net